ADVERTISEMENT

ಕೇಂದ್ರ ನೌಕರರ ಸಂಬಳ ಶೀಘ್ರ ಹೆಚ್ಚಳ

7ನೇ ವೇತನ ಆಯೋಗದ ಶಿಫಾರಸು ಬಗ್ಗೆ ವರದಿ ಸಲ್ಲಿಸಿದ ಸಮಿತಿ

​ಪ್ರಜಾವಾಣಿ ವಾರ್ತೆ
Published 28 ಜೂನ್ 2016, 0:29 IST
Last Updated 28 ಜೂನ್ 2016, 0:29 IST
ಕೇಂದ್ರ ನೌಕರರ ಸಂಬಳ ಶೀಘ್ರ ಹೆಚ್ಚಳ
ಕೇಂದ್ರ ನೌಕರರ ಸಂಬಳ ಶೀಘ್ರ ಹೆಚ್ಚಳ   

ನವದೆಹಲಿ (ಪಿಟಿಐ):  ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಶೀಘ್ರವೇ ಜಾರಿ ಮಾಡಲಿದ್ದು, ಸುಮಾರು ಒಂದು ಕೋಟಿ ಕೇಂದ್ರ ಸರ್ಕಾರಿ ನೌಕರು ಮತ್ತು ಪಿಂಚಣಿ ದಾರರಿಗೆ ಇದರಿಂದ ಲಾಭವಾಗಲಿದೆ.

ವೇತನದಲ್ಲಿ ಒಟ್ಟಾರೆ ಶೇಕಡ 23.5 ರಷ್ಟು ಹೆಚ್ಚಳವಾಗಲಿದೆ. ಸಂಪುಟ ಕಾರ್ಯದರ್ಶಿ ಪಿ. ಕೆ. ಸಿನ್ಹಾ ನೇತೃತ್ವದ ಕಾರ್ಯದರ್ಶಿಗಳ ಸಮಿತಿಯು  ವೇತನ ಆಯೋಗದ ಶಿಫಾರಸುಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಹಣಕಾಸು ಸಚಿವಾಲ ಯದ ಮೂಲಗಳು ತಿಳಿಸಿವೆ.

ಸಮಿತಿಯ ವರದಿ ಆಧಾರದ ಮೇಲೆ ಹಣಕಾಸು ಸಚಿವಾಲಯವು ಸಂಪುಟ ಟಿಪ್ಪಣಿ ಸಿದ್ಧಪಡಿಸಿದ್ದು, ಈ ತಿಂಗಳ 29 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಮಂಜೂರಾತಿ ದೊರಕುವ ಸಾಧ್ಯತೆಗಳು ಇವೆ.

ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಅಧ್ಯಯನ ಮಾಡಲು ಸರ್ಕಾರ ಜನವರಿಯಲ್ಲಿ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಕಾರ್ಯದರ್ಶಿಗಳ ಸಮಿತಿಯೊಂದನ್ನು ರಚಿಸಿತ್ತು.

ಒಟ್ಟಾರೆ ಶೇಕಡ 23.5ರಷ್ಟು ವೇತನ  ಮತ್ತು ಭತ್ಯೆಗಳ ಹೆಚ್ಚಳಕ್ಕೆ ವೇತನ ಆಯೋಗವು ಶಿಫಾರಸು ಮಾಡಿದೆ. ಆಯೋಗದ ಶಿಫಾರಸುಗಳನ್ನು ಜಾರಿ ಮಾಡಿದ ನಂತರ ಸರ್ಕಾರದ ಬೊಕ್ಕಸಕ್ಕೆ ` 1.2 ಲಕ್ಷ ಕೋಟಿ ಹೊರೆ ಬೀಳಲಿದೆ.  ಈ ಹೊರೆಯು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇಕಡ 0.7 ರಷ್ಟಾಗಲಿದೆ.

ವೇತನ ಆಯೋಗವು ಮೂಲ ವೇತನದಲ್ಲಿ ಶೇಕಡ 14.27 ರಷ್ಟು ಏರಿಸಲು ಶಿಫಾರಸು ಮಾಡಿದೆ. ಕಳೆದ 70 ವರ್ಷಗಳಲ್ಲಿ ಇಷ್ಟು ಕಡಿಮೆ  ಶಿಫಾರಸು ಮಾಡಿದ್ದು ಇದೇ ಮೊದಲು.

6ನೇ ವೇತನ ಆಯೊಗವು ಮೂಲ ವೇತನದಲ್ಲಿ ಶೇಕಡ 20ರಷ್ಟು  ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ಆದರೆ ಸರ್ಕಾರ 2008ರಲ್ಲಿ ಶಿಫಾರಸು ಜಾರಿ ಮಾಡುವಾಗ ದುಪ್ಪಟ್ಟು ಹೆಚ್ಚಳ ಮಾಡಿತ್ತು.

ವೇತನ ಆಯೋಗದ ಶಿಫಾರಸಿನ ಪ್ರಕಾರ ಕನಿಷ್ಠ ವೇತನವನ್ನು  ` 7 ಸಾವಿರದಿಂದ  18 ಸಾವಿರಕ್ಕೆ ಏರಿಸಬೇಕಾಗುತ್ತದೆ.  ಅತಿ ಹೆಚ್ಚು ಸಂಬಳ ಪಡೆಯುವ ಸಂಪುಟ ಕಾರ್ಯದರ್ಶಿ ಅವರ ವೇತನವು ` 90,000ದಿಂದ `  2.5 ಲಕ್ಷಕ್ಕೆ ಏರಲಿದೆ.

ಕಾರ್ಯದರ್ಶಿಗಳ ಸಮಿತಿಯು ಕನಿಷ್ಠ ವೇತನವನ್ನು ₹23,500 ಮತ್ತು ಗರಿಷ್ಠ ವೇತನವನ್ನು ₹3.25 ಲಕ್ಷಕ್ಕೆ ಏರಿಸಲು ಶಿಫಾರಸು ಮಾಡಲು ಬಯಸಿತ್ತು. ಆದರೆ 2016–17ನೇ ಸಾಲಿನ ಬಜೆಟ್‌ನಲ್ಲಿ ಏಳನೇ ವೇತನ ಆಯೋಗದ ಅನುಷ್ಠಾನಕ್ಕೆ ಅಗತ್ಯವಾದ ಅನುದಾನ ಮೀಸಲಿರಿಸಲಾಗಿಲ್ಲ. ಹಾಗಾಗಿ ಈ ಶಿಫಾರಸು ಮಾಡಲಾಗಿಲ್ಲ.

ಆದರೆ ಪ್ರತಿಯೊಂದು ಇಲಾಖೆ 10 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಗೆ ಸಂಬಂಧಿಸಿದ ಬಜೆಟ್ ಪಾಲನ್ನು ಪಡೆಯಲು ನಿಯಮ ಮಾಡಲಾಗಿದೆ. ಈ ಬಾಬ್ತಿನಲ್ಲಿ ಸುಮಾರು `  70 ಸಾವಿರ ಕೋಟಿ ಒದಗಿಸಲಾಗಿದೆ. 2016ರ ಜನವರಿ ಒಂದರಿಂದ ಪೂರ್ವಾನ್ವಯವಾಗಿ ಹೊಸ ವೇತನ ಜಾರಿಗೆ ಬರಲಿದೆ ಎಂದು ಹಣಕಾಸು ಕಾರ್ಯದರ್ಶಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.