ADVERTISEMENT

ಕೇಜ್ರಿವಾಲ್–‌ಜಂಗ್‌ ಸಂಘರ್ಷ ಉಲ್ಬಣ

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬಿಹಾರ ಪೊಲೀಸರ ನೇಮಕ ವಿಚಾರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2015, 19:30 IST
Last Updated 2 ಜೂನ್ 2015, 19:30 IST

ನವದೆಹಲಿ (ಪಿಟಿಐ): ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ನಡುವೆ ಮತ್ತೊಂದು ಸುತ್ತಿನ ಸಂಘರ್ಷ ಆರಂಭವಾಗಿದೆ.

ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕ್ಕೆ ಬಿಹಾರದ ಐವರು ಪೊಲೀಸರನ್ನು ನೇಮಿಸುವ ಅರವಿಂದ್‌ ಕೇಜ್ರಿವಾಲ್‌ ಅವರ ನಿರ್ಧಾರವನ್ನು ನಜೀಬ್‌ ಜಂಗ್‌ ಪ್ರಶ್ನಿಸಿದ್ದಾರೆ.

ಎಎಪಿ ಸರ್ಕಾರವು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಕಚೇರಿಗೆ ಮಾಡಿಕೊಂಡ ಮನವಿಯನ್ವಯ  ಬಿಹಾರ ಪೊಲೀಸ್‌ ಇಲಾಖೆಯ ಮೂವರು ಇನ್‌ಸ್ಪೆಕ್ಟರ್‌ಗಳು ಹಾಗೂ ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳು ದೆಹಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಯಾಗಿದ್ದಾರೆ. ನಜೀಬ್‌ ಜಂಗ್‌ ಅವರು ಈ ನೇಮಕಾತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ‘ಎಸಿಬಿ’ ನೇರವಾಗಿ ತಮ್ಮ  ನಿಯಂತ್ರಣದಲ್ಲಿ ಬರುತ್ತದೆ ಎಂದು ಹೇಳಿದ್ದಾರೆ.

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ದೆಹಲಿ ಸರ್ಕಾರ,  ದೇಶದ ಯಾವುದೇ ರಾಜ್ಯದಿಂದ ಪೊಲೀಸ್‌ ಅಧಿಕಾರಿಗಳನ್ನು ನೇಮಿಸುವ ಅಧಿಕಾರ ದೆಹಲಿ ಸರ್ಕಾರಕ್ಕೆ ಇದೆ. ಕೇಂದ್ರ ಸರ್ಕಾರ ಎಲ್ಲವನ್ನೂ ಹಾಸ್ಯಾಸ್ಪದವಾಗಿಸುತ್ತಿದೆ ಎಂದು ಟೀಕಿಸಿದೆ.

ಎಎಪಿ ನಾಯಕ ಅಶುತೋಷ್‌, ಕೇಂದ್ರ ಸರ್ಕಾರ ಮತ್ತು ಜಂಗ್‌  ಭ್ರಷ್ಟಾಚಾರ ನಿಗ್ರಹ ದಳದ  ಕಾರ್ಯನಿರ್ವಹಣೆಗೆ ತಡೆ ಒಡ್ಡುತ್ತಿದ್ದಾರೆ. ಭ್ರಷ್ಟಾಚಾರಿಗಳು ಮಾತ್ರ ಎಸಿಬಿಗೆ ಹೆದರಬೇಕು’ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿಯು  ‘ಎಎಪಿ ಸರ್ಕಾರ ಜಂಗ್‌ ಜತೆ ಅನಗತ್ಯ ಜಗಳಕ್ಕೆ ಇಳಿದಿದ್ದು, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದೆ.

ಕೇಂದ್ರ ಸರ್ಕಾರ ಸಂವಿಧಾನ, ಅಥವಾ ಕೋರ್ಟ್‌ ಆದೇಶ ಗೌರವಿಸುತ್ತಿಲ್ಲ. ಒಂದು ದಿನ ಅವರು ಲೆಫ್ಟಿನೆಂಟ್ ಗವರ್ನರ್‌ ಮೂಲಕ ಶ್ವೇತಭವನದಲ್ಲಿ ಆಡಳಿತ ನಡೆಸುತ್ತೇವೆ ಎನ್ನುಬಹುದು
ಮನೀಷ್‌ ಸಿಸೋಡಿಯಾ,
ದೆಹಲಿ ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.