ADVERTISEMENT

ಕೊಳವೆಬಾವಿಗೆ ಬಿದ್ದು ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2014, 19:30 IST
Last Updated 14 ಅಕ್ಟೋಬರ್ 2014, 19:30 IST

ಹೈದರಾಬಾದ್‌ (ಪಿಟಿಐ):  ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಹೊಲ­ದಲ್ಲಿ ಕೊರೆಯಲಾಗಿದ್ದ ಕೊಳವೆ ಬಾವಿಗೆ ಮೂರು ದಿನಗಳ ಹಿಂದೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕಿ ಗಿರಿಜಾ ಸಾವನ್ನಪ್ಪಿ­ದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೊಳೆತ ಸ್ಥಿತಿಯಲ್ಲಿದ್ದ ಬಾಲಕಿ ಶವ ಸುಮಾರು 45 ಅಡಿ ಆಳದಲ್ಲಿ ಸಿಕ್ಕಿಹಾಕಿ­ಕೊಂಡಿದೆ. ಶವ ಹೊರ ತೆಗೆಯುವ ಪ್ರಯತ್ನ ಮುಂದುವರಿದಿದೆ’ ಎಂದು ಪೊಲೀಸ್‌ ಅಧಿಕಾರಿ ರಾಮುಲು ನಾಯ್ಕ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

‘ಬಾಲಕಿಯ ದೇಹ ಕೊಳೆತಿದೆ. ಶವ ಹೊರ ತೆಗೆದು ಮರ­ಣೋತ್ತರ ಪರೀಕ್ಷೆ ನಡೆಸಿದ ನಂತರ ದೇಹ­ವನ್ನು ಕುಟುಂಬದ­ವರಿಗೆ ಹಸ್ತಾಂತ­ರಿ­ಸ­ಲಾ­ಗು­ವುದು’ ಎಂದು ಅವರು ತಿಳಿಸಿದ್ದಾರೆ.

ಮಂಚಾಲಾ ಗ್ರಾಮದಲ್ಲಿ ಭಾನು­ವಾರ ಹೊಲದಲ್ಲಿ ಆಟವಾ­ಡುತ್ತಿದ್ದ ಸಂದರ್ಭದಲ್ಲಿ ಬಾಲಕಿ ಕೊಳವೆ­ಬಾವಿಗೆ ಬಿದ್ದಿದ್ದಳು. ಸುಮಾರು 300 ಅಡಿ ಆಳದ ಕೊಳವೆ ಬಾವಿಯನ್ನು ಆರು ತಿಂಗಳ ಹಿಂದೆ ಕೊರೆಯಲಾಗಿತ್ತು. ನೀರು ಬಾರದೇ ಇರುವ ಕಾರಣ ಅದನ್ನು  ಮುಚ್ಚದೆ ಹಾಗೆಯೇ ಬಿಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಕೊಳವೆ ಬಾವಿ ಮುಚ್ಚದೆ ನಿರ್ಲಕ್ಷ್ಯ ವಹಿಸಿರುವ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.