ADVERTISEMENT

ಕೋರ್ಟ್‌ಗೆ ಕಾಂಗ್ರೆಸ್‌ ಮೊರೆ?

ಲೋಕಸಭೆ ಪ್ರತಿಪಕ್ಷ ನಾಯಕನ ಸ್ಥಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2014, 19:30 IST
Last Updated 5 ಜುಲೈ 2014, 19:30 IST

ನವದೆಹಲಿ: ಕಾಂಗ್ರೆಸ್‌ ಲೋಕಸಭೆ ವಿರೋಧ ಪಕ್ಷದ ಸ್ಥಾನಮಾನ ದೊರೆ­ಯ­ದಿದ್ದರೆ ಕೋರ್ಟ್‌ ಮೆಟ್ಟಿಲೇರುವ ಬಗ್ಗೆ ಕಾಂಗ್ರೆಸ್‌ ಪರಿಶೀಲಿಸುತ್ತಿದೆ.

ನಾವು ನಮಗೆ ಸಿಗಬೇಕಾದ ಮಾನ್ಯತೆ­ಗಾಗಿ ಕೋರ್ಟ್‌ ಮೆಟ್ಟಿಲು ಹತ್ತುವ ಆಲೋಚನೆ ಇದೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು ಸ್ಪಷ್ಟಪಡಿ­ಸಿ­ದ್ದಾರೆ. ಆದರೆ, ಸ್ವಲ್ಪ ಸಮಯ ಕಾದು ನೋಡುವುದಾಗಿ ಹೇಳಿದ್ದಾರೆ. 

ಸ್ಪೀಕರ್‌ ತೀರ್ಮಾನಿಸಿಲ್ಲ
ಕಾಂಗ್ರೆಸ್‌ಗೆ ಲೋಕಸಭೆ ವಿರೋಧ ಪಕ್ಷದ ಮಾನ್ಯತೆ ನೀಡುವ ಬಗ್ಗೆ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಇನ್ನೂ ಯಾವುದೇ ತೀರ್ಮಾನ ಪ್ರಕಟಿ­ಸಿಲ್ಲ.  ಸೋಮವಾರದಿಂದ ಆರಂಭವಾ­ಗುವ ಬಜೆಟ್‌ ಅಧಿ­ವೇಶನದ ಸುಗಮ ಕಲಾಪಕ್ಕೆ ಸಹಕಾರ ಕೇಳಲು ಶನಿವಾರ ಕರೆದಿದ್ದ ಸರ್ವಪಕ್ಷ ಸಭೆ­ಯಲ್ಲಿ ಸ್ಪೀಕರ್‌ ಈ ಬಗ್ಗೆ  ಪ್ರಸ್ತಾಪಿಸಲಿಲ್ಲ.

ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನಮಾನ ನೀಡುವ ಕುರಿತು ಕೇಳಿದ ಪ್ರಶ್ನೆಗೆ, ಸುಮಿತ್ರಾ ಮಹಾಜನ್‌ ಉತ್ತರಿಸಲಿಲ್ಲ. ಆದರೆ, ಕೆಲವು ದಿನಗಳ ಮುನ್ನ ಸಂವಿಧಾನ ತಜ್ಞರು ಹಾಗೂ ಅನುಭವಿ ನಾಯಕರ ಜತೆ ಸಮಾಲೋಚಿಸಿದ ಬಳಿಕ ಬಜೆಟ್‌ ಅಧಿವೇಶನಕ್ಕೆ ಮುನ್ನ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದರು. ಸ್ಪೀಕರ್‌ ಸಭೆಯಲ್ಲಿ ಕಾಂಗ್ರೆಸ್‌ಗೆ ಪ್ರತಿಪಕ್ಷದ ಮಾನ್ಯತೆ ನೀಡುವ ವಿಷಯ ಚರ್ಚೆಯಾ­ಗಲಿಲ್ಲ ಎಂದು ಕಾಂಗ್ರೆಸ್‌ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕಾಂಗ್ರೆಸ್‌ ಇನ್ನೂ ಅಧಿಕೃತವಾಗಿ ವಿರೋಧ ಪಕ್ಷದ ಸ್ಥಾನಮಾನಕ್ಕೆ ಮನವಿ ಮಾಡದೆ ಇರುವಾಗ ಸ್ಪೀಕರ್‌ ಈ ಬಗ್ಗೆ ಹೇಗೆ ತೀರ್ಮಾನ ಮಾಡಲು ಸಾಧ್ಯ. ಅಲ್ಲದೆ, 1977ರ ನಿಯಮಾವಳಿ ಪ್ರಕಾರ  ವಿರೋಧ ಪಕ್ಷದ ಮಾನ್ಯತೆ ಹಕ್ಕು ಮಂಡಿಸಲು ಅಗತ್ಯವಿರುವ ಸದಸ್ಯರ ಬಲ ಕಾಂಗ್ರೆಸ್‌ಗೆ ಇಲ್ಲ ಎಂದು ಸಚಿವರೊ­ಬ್ಬರು ಹೇಳಿದರು. ಹೆಸರು ಬಹಿರಂಗ ಮಾಡಬಾರದು ಎಂಬ ಷರತ್ತಿನ ಮೇಲೆ ಮಾತನಾಡಿದ ಅವರು, 1984ರಲ್ಲಿ ಟಿಡಿಪಿಗೆ ವಿರೋಧ ಪಕ್ಷದ ಮಾನ್ಯತೆ ನೀಡದ ಪ್ರಸಂಗವನ್ನು ಉದಾಹರಿಸಿದರು.

‘ಕಾಂಗ್ರೆಸ್‌ ಅಧಿಕೃತವಾಗಿ ಸ್ಪೀಕರ್‌ಗೆ ಮನವಿ ಮಾಡುವುದೆೇ’ ಎಂಬ ಪ್ರಶ್ನೆಗೆ, ಸೋನಿಯಾ ಮತ್ತು ರಾಹುಲ್‌ ಅವ­ರೊಂದಿಗೆ ಚರ್ಚಿಸಿ, ಉಭಯ ಸದನಗಳ ನಾಯಕರು ತೀರ್ಮಾನ ಕೈಗೊಳ್ಳಲಿ­ದ್ದಾರೆ ಎಂದು ಪಕ್ಷದ ವಕ್ತಾರ ರಣ­ದೀಪ್‌ ಸುರ್ಜಿವಾಲ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT