ADVERTISEMENT

ಖಾಸಗಿ ಬಸ್‌ಗೆ ರಾಜ್ಯ ಸರ್ಕಾರದ ಪರವಾನಗಿ: ಸಾರಿಗೆ ಸಂಸ್ಥೆ ವಿರೋಧ

ಪುನರ್‌ಪರಿಶೀಲನೆಗೆ ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 19:30 IST
Last Updated 20 ಡಿಸೆಂಬರ್ 2014, 19:30 IST

ನವದೆಹಲಿ: ಬೆಂಗಳೂರು, ಮೈಸೂರು, ಕನಕಪುರ, ಬಳ್ಳಾರಿ ಹಾಗೂ ಬಿಟಿಎಸ್‌ ವಿಭಾಗ­ಗಳಲ್ಲಿ ಖಾಸಗಿ ಬಸ್‌ ಓಡಿಸಲು ಪರ­ವಾನಗಿ ನೀಡಿರುವ ಸಂಬಂಧ ರಾಜ್ಯ ಸಾರಿಗೆ ಸಂಸ್ಥೆ ಎತ್ತಿರುವ ಆಕ್ಷೇಪ ಕುರಿತು ಪುನರ್‌ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

‘ಮೋಟಾರು ವಾಹನ ಕಾಯ್ದೆ’ಗೆ ತಿದ್ದುಪಡಿ ಮಾಡಿ ಖಾಸಗಿಯವರಿಗೆ ಬಸ್‌ ಓಡಿಸಲು ಪರವಾನಗಿ ನೀಡಿರುವ ರಾಜ್ಯ ಸರ್ಕಾರದ 2011ರ ಆದೇಶ­ವನ್ನು ರದ್ದುಪಡಿಸಿದ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಹಲವು ಮೇಲ್ಮನವಿಗಳನ್ನು ನ್ಯಾ. ಜೆ. ಎಸ್‌ ಖೇಹರ್‌ ಮತ್ತು ನ್ಯಾ. ಅರುಣ್‌ ಮಿಶ್ರ ಅವರನ್ನೊಳಗೊಂಡ ನ್ಯಾಯಪೀಠ ವಜಾ ಮಾಡಿತು.

ರಾಜ್ಯ ಸಾರಿಗೆ ಸಂಸ್ಥೆ ಒದಗಿಸುತ್ತಿರುವ ಸೇವೆಗೆ ಹೊರತಾಗಿರುವ ಪ್ರಯಾಣಿಕರ ಬೇಡಿಕೆಯನ್ನು ಖಾಸಗಿ ನಿರ್ವಾಹಕರು ಪೂರೈಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ನೀಡಿರುವ ಕಾರಣ ‘ಸಹಜ ನ್ಯಾಯ ಸಿದ್ಧಾಂತ’ಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಕೆಲವು ಮಾರ್ಗಗಳಲ್ಲಿ ಬಸ್‌ ಓಡಿಸಲು ಖಾಸಗಿಯವರಿಗೆ ಅನುಮತಿ ನೀಡುವ ಮೊದಲು ರಾಜ್ಯ ಸಾರಿಗೆ ಸಂಸ್ಥೆ ಎತ್ತಿ­ರುವ ಆಕ್ಷೇಪಗಳನ್ನು ಪರಿಶೀಲಿಸ­ಬೇಕಿತ್ತು. ಆಕ್ಷೇಪ ತಿರಸ್ಕರಿಸಿರುವುದಕ್ಕೆ ಕಾರಣ ಕೊಡಬೇಕಿತ್ತು. ಇಲ್ಲದಿದ್ದರೆ ಸರ್ಕಾರದ ನಿರ್ಧಾರ ಏಕಪಕ್ಷೀಯವಾಗ­ಲಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸಾರಿಗೆ ಸಂಸ್ಥೆ ಎತ್ತಿರುವ ಆಕ್ಷೇಪಣೆ­ಗಳನ್ನು ಮೂರು ತಿಂಗಳಲ್ಲಿ ಪರಿಶೀಲಿಸ­ಬೇಕು. ಖಾಸಗಿಯವರಿಗೆ ಅನುಮತಿ ನೀಡಿರುವ ಕ್ರಮಬದ್ಧತೆ ಪರಿಶೀಲಿಸಿ ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳ­ಬೇಕೆಂದು ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಕೆಲವು ಮಾರ್ಗಗಳಲ್ಲಿ ಖಾಸಗಿ ಬಸ್‌ ಓಡಿಸಲು ಅನುಮತಿ ನೀಡಿರುವ ಕ್ರಮ­ವನ್ನು ಪ್ರಶ್ನಿಸಿದ ರಾಜ್ಯ ಸಾರಿಗೆ ಸಂಸ್ಥೆ, ಖಾಸಗಿಯವರಿಗೆ ಅನುಕೂಲ ಮಾಡಿ­ಕೊಡುವ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಪ್ರತಿಪಾದಿಸಿದೆ. ಪ್ರಯಾಣಿಕರ ಬೇಡಿಕೆ ಪೂರೈಸಲು ಸಾರಿಗೆ ಸಂಸ್ಥೆ ಸರ್ವ ರೀತಿ­ಯಲ್ಲೂ ಸನ್ನದ್ಧ­ವಾಗಿದೆ. ಆಧುನಿಕ­ವಾದ ಬಸ್ಸು­ಗಳು ಹಾಗೂ ಬಸ್‌ ನಿಲ್ದಾಣಗಳನ್ನು ಹೊಂದಿದೆ. ವಿವಿಧ ವರ್ಗಗಳಿಗೆ ರಿಯಾಯ್ತಿ ಬಸ್‌ ಪಾಸ್‌­ಗಳನ್ನು ವಿತರಿಸುತ್ತಿದೆ ಎಂದು ಸಂಸ್ಥೆ ವಿವರಿಸಿದೆ.

ರಾಜ್ಯ ಹೈಕೋರ್ಟ್‌ 2011ರಲ್ಲಿ ರಾಜ್ಯ ಸರ್ಕಾರ ಮಾಡಿರುವ ಬಳ್ಳಾರಿ ಹಾಗೂ ಕೋಲಾರ, ಬೆಂಗಳೂರು ಮತ್ತು ಕನಕ­ಪುರ ಯೋಜನೆಯನ್ನು ವಜಾ ಮಾಡಿದೆ. ಈ ಯೋಜನೆಗಳನ್ನು 2003ರಲ್ಲಿ ಜಾರಿಗೊಳಿಸಲಾಗಿತ್ತು. ಮೈಸೂರು ಮತ್ತು ಬಿಟಿಎಸ್‌ ಯೋಜನೆ­ಗಳನ್ನು 2007ರಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.