ADVERTISEMENT

ಗುಲ್ಜಾರ್‌ಗೆ ಫಾಲ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 19:30 IST
Last Updated 12 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ‘ತುಜಸೆ ನಾರಾಝ ನಹಿ’ ಮತ್ತು ‘ತೇರೆ ಬಿನಾ ಜಿಂದಗಿ ಸೆ’ ಸೇರಿದಂತೆ ಸದಾಕಾಲ ನೆನಪಿನಲ್ಲಿರುವ ಗೀತೆಗಳನ್ನು ರಚಿಸಿರುವ ಗೀತೆ ರಚನೆ­ಕಾರ, ‘ಆನಂದಿ’ ಮತ್ತು ‘ಮೌಸಮ್‌’ ಚಿತ್ರಗಳನ್ನು ನಿರ್ದೇ­ಶಿಸಿರುವ ಗುಲ್ಜಾರ್‌ ಅವರು ಪ್ರತಿಷ್ಠಿತ ‘ದಾದಾ ಸಾಹೇಬ್‌ ಫಾಲ್ಕೆ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಕಲಾವಿರನ್ನೊಳಗೊಂಡ ಏಳು ಸದಸ್ಯರ ಆಯ್ಕೆ ಸಮಿತಿ ಗುಲ್ಜಾರ್‌ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸು ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

79 ವರ್ಷ ವಯಸ್ಸಿನ ಗುಲ್ಜಾರ್‌ ಪಾಕಿಸ್ತಾನದ ಪೂರ್ವ ಪಂಜಾಬ್‌ ಕಲ್ರಾ­ದಲ್ಲಿ 1934ರಲ್ಲಿ ಜನಿಸಿದರು. ದೇಶ ವಿಭ­ಜನೆಯ ನಂತರ ಗುಲ್ಜಾರ್‌ ಕುಟುಂಬ ಅಮೃತಸರಕ್ಕೆ ಬಂದು ನೆಲೆಸಿತು. ಬಳಿಕ ಗುಲ್ಜಾರ್ ಬಾಂಬೆಗೆ ಬಂದು ಗ್ಯಾರೇಜ್‌­ವೊಂದರಲ್ಲಿ ಮೆಕ್ಯಾ­ನಿಕ್‌ ಕೆಲಸಕ್ಕೆ ಸೇರಿಕೊಂಡರು.

ಕೆಲಸಕ್ಕೆ ಸೇರಿಕೊಂಡ ಗುಲ್ಜಾರ್ ಬಿಡು­ವಿನ ವೇಳೆಯಲ್ಲಿ ಕವನಗಳನ್ನು ರಚಿಸುತ್ತಿದ್ದರು. ಗುಲ್ಜಾರ್‌ 1956ರಲ್ಲಿ ವೃತ್ತಿ ಬದುಕು ಆರಂ­ಭಿಸಿದರು. ಬಿಮಲ್‌ ರಾಯ್‌ ಅವರ ‘ಬಂದಿನಿ’ ಚಿತ್ರಕ್ಕೆ ಗುಲ್ಜಾರ್‌ ಗೀತೆ ರಚನಾಕಾರರಾಗಿದ್ದರು. ಈ ಚಿತ್ರ ಗುಲ್ಜಾರ್‌ ವೃತ್ತಿ ಬದುಕಿಗೆ ಬ್ರೇಕ್‌ ನೀಡಿತು.

ಖ್ಯಾತ ನಿರ್ದೇಶಕರಾದ ಎಸ್‌.ಡಿ.­ಬರ್ಮನ್‌, ಸಾಲಿಲ್‌ ಚೌಧರಿ, ಶಂಕರ ಜೈಕಿಸ್‌, ಹೇಮಂತ ಕುಮಾರ್‌, ಲಕ್ಷ್ಮೀ­ಕಾಂತ್‌ ಪ್ಯಾರೆಲಾಲ್‌, ಮದನ್‌ ಮೋಹನ್‌, ರಾಜೇಶ ರೋಶನ್‌, ಅನು ಮಲ್ಲಿಕ್‌ ಮತ್ತು ಶಂಕರ ಎಹ್ಸಾನ್‌ ಲಾಯ್‌ ಅವರೊಂದಿಗೂ ಗುಲ್ಜಾರ್‌ ಕೆಲಸ ಮಾಡಿದ್ದಾರೆ.

ಗೀತೆ ರಚನೆಯೊಂದಿಗೆ ಅನೇಕ ಚಿತ್ರ­ಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷ­ಣೆಗಳನ್ನೂ ಅವರು ಬರೆದಿ­ದ್ದಾರೆ. ಕೆಲ ಚಿತ್ರಗಳನ್ನೂ ಅವರು ನಿರ್ಮಿಸಿದ್ದಾರೆ.

‘ಮಿರ್ಜಾ ಗಾಲಿಬ್‌’ ಮತ್ತು ‘ತಹರೀರ್‌ ಮುನ್ಸಿ ಪ್ರೇಮ್‌ಚಂದ್‌ ಕಿ’ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಕಿರುತೆರೆಯಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮ­ಭೂಷಣ, 20 ಫಿಲ್ಮಂಫೇರ್‌ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಅವರು ಪಡೆ­ದಿದ್ದಾರೆ. ‘ಜೈ ಹೋ’ ಹಾಡಿಗೆ ‘ಗ್ರ್ಯಾಮಿ’ ಪ್ರಶಸ್ತಿಯೂ ಅವರಿಗೆ ಲಭಿಸಿದೆ.

ಮೂರು ಸಾಲುಗಳ (ತ್ರಿವೇಣಿ) ಕವನ­ಗಳನ್ನು ಬರೆಯುವ ಮೂಲಕ ಉರ್ದು ಕವನ ರಚನೆಯಲ್ಲಿ ಹೊಸ ಶೈಲಿ­ಯನ್ನು ಆರಂಭಿಸಿದ ಶ್ರೇಯ ಗುಲ್ಜಾರ್‌ ಅವರಿಗೆ ಸಲ್ಲುತ್ತದೆ. ಗುಲ್ಜಾರ್‌ ಅವರು ನಟಿ ರಾಖಿ ಅವ­ರನ್ನು ಮದುವೆಯಾಗಿದ್ದು, ಮೇಘನಾ ಎಂಬ ಮಗಳಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.