ADVERTISEMENT

ಘನತೆಗೆ ಕುಂದು: ಸುಜಾತಾ ನೋವು

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 19:30 IST
Last Updated 30 ಜನವರಿ 2015, 19:30 IST

ನವದೆಹಲಿ (ಪಿಟಿಐ): ‘ನನ್ನ 39 ವರ್ಷಗಳ ಸೇವಾ ಅವಧಿಯನ್ನು ಕಡೆ­ಗಣಿಸಿ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ಸ್ಥಾನದಿಂದ ಹಠಾತ್‌ ಬಿಡುಗಡೆಗೊಂಡ ಸುಜಾತಾ ಸಿಂಗ್‌ ನೋವಿನಿಂದ ಹೇಳಿಕೊಂಡಿದ್ದಾರೆ.

  ‘ಯಾವುದೇ ವಿವಾದ ಇಲ್ಲದೆಯೇ ನಾನೇ ರಾಜೀನಾಮೆ ನೀಡಲು ಬಯ­ಸಿದ್ದೆ. ಆದರೆ  ದುರದೃಷ್ಟವಶಾತ್‌  ಅದಕ್ಕೆ ಅವಕಾಶವಾಗಲಿಲ್ಲ. ನನ್ನ ಘನತೆಗೆ ಕುಂದು ಉಂಟಾಗಿದೆ’ ಎಂದು ಅವರು ಎನ್‌ಡಿಟಿವಿಗೆ ನೀಡಿದ ಸಂರ್ಶನದಲ್ಲಿ ಹೇಳಿದರು.

‘ಜ.28 ರಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌್ ನನಗೆ ಕರೆ ಮಾಡಿ­ದರು. ಜೈಶಂಕರ್‌್ ಅವರನ್ನು ವಿದೇ­ಶಾಂಗ ಕಾರ್ಯದರ್ಶಿಯನ್ನಾಗಿ ಮಾಡಲು ಪ್ರಧಾನಿ ಬಯಸಿದ್ದಾರೆ ಎಂದರು.  ನಾನು ರಾಜೀನಾಮೆ ಪತ್ರ ಸಿದ್ಧಪಡಿಸಿಕೊಂಡಿದ್ದೆ.  ರಾಜೀನಾಮೆ ಕೊಟ್ಟಲ್ಲಿ ನಿವೃತ್ತಿ ಸೌಲಭ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಲಾಯಿತು. ಆದ ಕಾರಣ ‘ಪ್ರಧಾನಿ ಸೂಚಿಸಿದಂತೆ’ ಅವಧಿಗೆ ಮುನ್ನ ನಿವೃತ್ತಿ ಬಯಸಿ ಪತ್ರ ಬರೆದೆ. ಒಂದೆರಡು ಗಂಟೆ­ಗಳಲ್ಲಿಯೇ ಸರ್ಕಾರಿ ಜಾಲತಾಣದಲ್ಲಿ ಸುಜಾತಾ ಅವರ ಅವಧಿಯನ್ನು ತಕ್ಷಣದಿಂದ ಅನ್ವಯವಾಗುವಂತೆ ಮೊಟಕುಗೊಳಿಸಲಾಗಿದೆ ಎಂಬ ಅಧಿಕೃತ ಹೇಳಿಕೆ ಹಾಕಲಾಯಿತು’  ಎಂದು ಸುಜಾತಾ ಹೇಳಿದರು.

  ‘ಮೂರು ವಾರಗಳ ಹಿಂದೆಯೇ ನನ್ನನ್ನು ಈ ಸ್ಥಾನದಿಂದ ತೆಗೆಯುವ ಸೂಚನೆ ಸಿಕ್ಕಿತ್ತು. ಸೇವಾ ಅವಧಿ ಪೂರೈಸಲು ಬೇರೆ ಯಾವುದಾದರೂ ಸ್ಥಾನಕ್ಕೆ ತೆರಳಲು ಆಸಕ್ತಿ ಇದೆಯೇ ಎಂದು ಪರೋಕ್ಷವಾಗಿ ಕೇಳಲಾಗಿತ್ತು. ಯುಪಿಎಸ್‌ಸಿ ಸದಸ್ಯತ್ವ ಅಥವಾ  ರಾಯ­ಭಾರಿ ಸೇರಿದಂತೆ ನನಗೆ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಆಸಕ್ತಿ ಇರಲಿಲ್ಲ’ ಎಂದೂ ಅವರು ತಿಳಿಸಿದರು.

  ಅಮೆರಿಕದ ಅಧ್ಯಕ್ಷ ಬರಾಕ್‌್ ಒಬಾಮ ಅವರ ಯಶಸ್ವಿ ಭಾರತ ಭೇಟಿ ಬೆನ್ನಲ್ಲಿಯೇ  ಸುಜಾತಾ ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

‘ಇದು ಮೊದಲೇ ತೆಗೆದುಕೊಂಡ ನಿರ್ಧಾರ. ಒಬಾಮ ಭೇಟಿಯ ರಾಜ­ತಾಂತ್ರಿಕ ಯಶಸ್ಸಿನಿಂದ   ಸರ್ಕಾರದ ನಿರ್ಧಾರ ಬದಲಾಗುತ್ತಿರಲಿಲ್ಲ. ಎನ್‌ಡಿಎ ಸರ್ಕಾರದ ಎಂಟು ತಿಂಗಳ ಅವಧಿ­ಯಲ್ಲಿ ಬಹುಮುಖ್ಯ ರಾಜ­ತಾಂತ್ರಿಕ ನಿರ್ಧಾರಗಳನ್ನು ತೆಗೆದುಕೊಳ್ಳ­ಲಾಗಿದೆ. ಕೇವಲ ಪ್ರಧಾನಿ ಕಚೇರಿ ಅಥವಾ ವಿದೇಶಾಂಗ ಇಲಾಖೆಗಳು ಕಾರ್ಯನಿರ್ವಹಿಸಿದ್ದರೆ  ಇವೆಲ್ಲ ಸಾಧ್ಯವಾಗುತ್ತಿರಲಿಲ್ಲ.

ಸಮಾಲೋಚನೆ, ನಿರ್ಧಾರ ತೆಗೆದುಕೊಳ್ಳುವಿಕೆ...ಹೀಗೆ ಎಲ್ಲ ಪ್ರಕ್ರಿಯೆಯಲ್ಲಿಯೂ ನಾನು ಭಾಗಿ­ಯಾಗಿದ್ದೆ. ಪ್ರಧಾನಿ ಕಚೇರಿಯೊಂದಿಗೆ ನಾನು ಸಮನ್ವಯತೆಯಿಂದ ಕೆಲಸ ಮಾಡಿದ್ದೆ’ ಎಂದು ಸುಜಾತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.