ADVERTISEMENT

ಚರ್ಚೆಗೆ ಪೂರಕ ವಾತಾವರಣ ಪಾಕ್‌ ಹೊಣೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ನವದೆಹಲಿ: ಪಾಕಿಸ್ತಾನದ ಜತೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ. ಆದರೆ, ಅದು ಮಾತುಕತೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಭಾರತ ಶುಕ್ರವಾರ ಸ್ಪಷ್ಟಪಡಿಸಿದೆ.

‘ನಾವು ಪಾಕಿಸ್ತಾನದ ಜತೆ ಮಾತುಕತೆಗೆ ಸಿದ್ಧ. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವ ಹೊಣೆ ಆ ದೇಶದ್ದು’ ಎಂದು ವಿದೇಶಾಂಗ ವ್ಯವ-ಹಾರ ಸಚಿವಾಲಯದ ವಕ್ತಾರ ಸಯ್ಯದ್‌ ಅಕ್ಬರು-ದ್ದೀನ್‌ ತಿಳಿಸಿದರು.ಉಭಯ ದೇಶಗಳ ಮಾತುಕತೆ ‘ಶಿಮ್ಲಾ ಒಪ್ಪಂದ’ ಹಾಗೂ ‘ಲಾಹೋರ್‌ ಘೋಷಣೆ’ ಚೌಕಟ್ಟಿ---ನೊಳಗೇ ನಡೆಯಬೇಕು. ಮೂರನೇ ದೇಶದ ಮಧ್ಯಸ್ಥಿಕೆಗೆ ಅವಕಾಶ ಇರಕೂಡದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭಾರತ ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ಚಕಮಕಿ ನಡೆಸುವ ಮೂಲಕ ಕದನ ವಿರಾಮ ಉಲ್ಲಂಘಿ-ಸುತ್ತಿದೆ’ ಎಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿ ಗುರುವಾರ ಅಂಗೀಕರಿಸಿರುವ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಆಂತರಿಕ ವಿಷಯವಾಗಿರುವವರೆಗೂ ನಾವು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದರು.

‘ನೂರು ಕೋಟಿ ಜನರಿರುವ ದೇಶ ನಮ್ಮದು. ಲಕ್ಷ ಜನರ ಆಂದೋಲನಕ್ಕೆ ಆತಂಕಪಡುವ ಅಗತ್ಯ-ವಿಲ್ಲ’ ಎಂದು ಲಂಡನ್‌ನಲ್ಲಿ ಇದೇ 26ರಂದು ಏರ್ಪ-ಡಿಸಿರುವ ‘ಕಾಶ್ಮೀರಿ ಮಿಲಿಯನ್‌ ಮಾರ್ಚ್’ ಕುರಿತು ಅಕ್ಬರುದ್ದೀನ್‌ ಹೇಳಿದರು. ಮಿಲಿಯನ್‌ ಮಾರ್ಚ್‌ ಕುರಿತು ಬ್ರಿಟನ್‌ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದೆ. ಭಾರತ ಹಾಗೂ ಪಾಕ್‌ ತಮ್ಮ ನಡುವಿನ ಬಿಕ್ಕಟ್ಟನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಬೇಕು ಎನ್ನುವ ನಿಲುವನ್ನು ಅದು ಸ್ಪಷ್ಟಪಡಿಸಿದೆ ಎಂದು ಹೇಳಿದರು.

‘ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನಡೆ-ಯ--ಲಿರುವ ಸಾರ್ಕ್‌ ರಾಷ್ಟ್ರಗಳ ಶೃಂಗ ಸಮಾ-ವೇಶದ ಬದಿಯಲ್ಲಿ ನರೇಂದ್ರ ಮೋದಿ ಮತ್ತು ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಭೇಟಿ ಮಾಡುವರೇ?’ ಎನ್ನುವ ಮತ್ತೊಂದು ಪ್ರಶ್ನೆಗೆ, ಆ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಉತ್ತರಿಸಿದರು.

ಮುಂದಿನ ವಾರ ಎರಡು ದಿನಗಳ ಭೇಟಿಗಾಗಿ ವಿಯಟ್ನಾಂ ಪ್ರಧಾನಿ ಎನ್‌ಗುಯೆನ್‌ ಟನ್‌ ಡಂಗ್ಸ್‌ ಭಾರತಕ್ಕೆ ಬರಲಿದ್ದಾರೆ. ಅವರ ಭೇಟಿ ಉಭಯ ದೇಶಗಳ ನಡುವಿನ ವ್ಯಾಪಾರ– ವಹಿವಾಟು ಮತ್ತು ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಉತ್ತೇಜಿ-ಸಲಿದೆ. ದಕ್ಷಿಣ ಚೀನಾದ ಸಮುದ್ರದಲ್ಲಿ ತೈಲ ಸಂಸ್ಕರಣೆಗೆ ಇನ್ನಷ್ಟು ನಿಕ್ಷೇಪಗಳನ್ನು ನೀಡಲು ವಿಯಟ್ನಾಂ  ಮುಂದಾಗಿರುವ ಕುರಿತು ಭಾರತ ಪರಿಶೀಲಿಸಲಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.