ADVERTISEMENT

ಚಲಿಸುವ ರೈಲಿನಿಂದ ಮಹಿಳೆ ಹೊರಕ್ಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2014, 11:26 IST
Last Updated 20 ನವೆಂಬರ್ 2014, 11:26 IST

ಭೋಪಾಲ್, ಮಧ್ಯಪ್ರದೇಶ (ಪಿಟಿಐ): 29 ವರ್ಷದ ಮಹಿಳೆಯೊಬ್ಬರನ್ನು ದೋಚಿದ ಬಳಿಕ ಇಬ್ಬರು ದುಷ್ಕರ್ಮಿಗಳು, ಅವರನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ನೂಕಿದ್ದಾರೆ ಎನ್ನಲಾಗಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೀಡಾದ  ಮಹಿಳೆಯನ್ನು ರತಿ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಅವರು ದೆಹಲಿಯಲ್ಲಿ ಖಾಸಗಿ ಕಂಪೆನಿಯೊಂದರ ಉದ್ಯೋಗಿ. ರತಿ ಅವರ  ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ರತಿ ಅವರ ತಾಯಿ ಮಿಥ್ಯಾ ತ್ರಿಪಾಠಿ ಹಾಗೂ ಅವರ ಸಹೋದರ ಆದಿತ್ಯಮಿಕ್ ಅವರು ಮಾಳ್ವಾ ಎಕ್ಸ್‌ಪ್ರೆಸ್‌ ರೈಲಿನ ಎಸ್‌7 ಬೋಗಿಯಲ್ಲಿ ರತಿ ಅವರನ್ನು ಹುಡುಕಿದಾಗ ಈ ವಿಷಯ ಬಹಿರಂಗಗೊಂಡಿದೆ.

ADVERTISEMENT

ರತಿ ಕಾಣದಿದ್ದಾಗ ತಾಯಿ ಹಾಗೂ ಸಹೋದರ ಸಹ ಪ್ರಯಾಣಿಕರನ್ನು  ವಿಚಾರಿಸಿದ್ದಾರೆ. ಈ ವೇಳೆ ಲಲಿತಪುರ ಹಾಗೂ ಕರೌಡಾ ನಡುವಣ ನಿಲ್ದಾಣ ಬಿನಾ ಸಮೀಪದಲ್ಲಿ ಸೀಟಿನ ವಿಚಾರವಾಗಿ ಉಂಟಾದ ವಿವಾದದ ಬಳಿಕ ಇಬ್ಬರು ವ್ಯಕ್ತಿಗಳು ರತಿ ಅವರನ್ನು ಚಲಿಸುವ ರೈಲಿನಿಂದ ಹೊರಕ್ಕೆ ತಳ್ಳಿರುವ ಸಂಗತಿ ತಿಳಿದು ಬಂದಿದೆ.

ಬಳಿಕ ಅವರ ತಾಯಿ ಹಾಗೂ ಸಹೋದರ ಬಿನಾ ರೈಲು ನಿಲ್ದಾಣಕ್ಕೆ ಧಾವಿಸಿದಾಗ ರೈಲು ಕಂಬಿಯ ಮೇಲೆ  ಒಬ್ಬರು ಮಹಿಳೆ ಪತ್ತೆಯಾಗಿದ್ದಾರೆ. ಅವರನ್ನು ಭೋಪಾಲ್‌ಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೋಪಾಲ್‌ ತೆರಳಿದಾಗ ಖಾಸಗಿ ಆಸ್ಪತ್ರೆಯಲ್ಲಿ ರತಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ತಾಯಿ, ಸಹೋದರ ಹಾಗೂ ರತಿ ಅವರು ಮಹಾಕಾಲೇಶ್ವರ ದೇವಾಲಯಕ್ಕೆ ಭೇಟಿ ನೀಡಲು ಉದ್ದೇಶಿಸಿ ದೆಹಲಿಯಿಂದ ಉಜ್ಜೈನಿಗೆ ಹೊರಟ್ಟಿದ್ದರು. ದೇವಸ್ಥಾನಕ್ಕೆ ಭೇಟಿ ನೀಡುವ ಉದ್ದೇಶದೊಂದಿಗೆ ರತಿ ಅವರ ತಾಯಿ ಮತ್ತು ಅವರ ಸಹೋದರ ಕಾನ್ಪುರ್‌ನಿಂದ ಉಜ್ಜೈನಿಗೆ ಬಂದಿದ್ದರು.

ಇನ್ನು, ಅನಾಮಿಕ ವ್ಯಕ್ತಿಗಳು ತಮ್ಮ ಮಗಳ ಪರ್ಸು, ಮೊಬೈಲ್‌, ಚೈನು ಹಾಗೂ ಓಲೆಗಳನ್ನು ದೋಚಿದ್ದಾರೆ. ಸಹ ಪ್ರಯಾಣಿಕರು ಅಲಾರಂ ಮೊಳಗಿಸಿದ್ದರೂ ರೈಲಿನಲ್ಲಿದ್ದ ಭದ್ರತಾ ಸಿಬ್ಬಂದಿ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅವರ ತಾಯಿ ದೂರಿದ್ದಾರೆ.

ಆಸ್ಪತ್ರೆಗೆ ಬಂದು ರತಿ ಅವರ ಕುಟುಂಬದವರನ್ನು ಭೇಟಿ ಮಾಡಿದ ಮಧ್ಯಪ್ರದೇಶ ಗೃಹಸಚಿವ ಬಾಬುಲಾಲ್‌ ಗೌರ್‌ ಅವರು ತಪ್ಪಿತಸ್ಥರನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.