ADVERTISEMENT

ಚುಮಾರ್‌ನಲ್ಲಿ ಚೀನಾ ಕಣ್ಣಾಮುಚ್ಚಾಲೆ

ಗಡಿಯಲ್ಲಿ ಇನ್ನೂ ಕಟ್ಟೆಚ್ಚರ, ಮುಂದುವರಿದ ‘ಅಲೆಮಾರಿ’ ಕಾಟ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 19:30 IST
Last Updated 19 ಸೆಪ್ಟೆಂಬರ್ 2014, 19:30 IST

ಲೇಹ್‌/ ನವದೆಹಲಿ (ಪಿಟಿಐ): ಲಡಾಖ್‌ನ ಚುಮಾರ್‌ ಗಡಿ ಪ್ರದೇಶದಲ್ಲಿ ಭಾರತದ ಭೂಪ್ರ­ದೇಶಕ್ಕೆ ನುಗ್ಗಿದ್ದ ಚೀನಾದ ಸೇನೆ ಗುರುವಾರ ರಾತ್ರಿ ಕಾಲ್ತೆಗೆ­ಯಲು ಆರಂಭಿಸಿತು. ಆದರೆ ಶುಕ್ರ­ವಾರ ರಾತ್ರಿ ಹೊತ್ತಿಗೆ ಚುಮಾರ್‌ ಪ್ರದೇಶದ ಗುಡ್ಡ­ವೊಂದರ ಮೇಲೆ ಮತ್ತೆ ಕೆಲವು ಚೀನಾ ಸೈನಿಕರು ಕಾಣಿಸಿ­ಕೊಂ­ಡಿದ್ದು ಪುನಃ ಆತಂಕವನ್ನು ಸೃಷ್ಟಿಸಿದೆ.

ಚೀನಾದ ಸೇನಾ ಯೋಧರು ಗುರುವಾರ ರಾತ್ರಿ ೯.೪೫ರ ಹೊತ್ತಿಗೆ ಭಾರತದ ನೆಲದಿಂದ ಹಿಂದೆ ಸರಿ­ಯ­ಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ಆ ಪ್ರದೇ­ಶಕ್ಕೆ ಭಾರಿ ಸಂಖ್ಯೆಯಲ್ಲಿ ನಿಯೋಜಿಸಲಾಗಿದ್ದ ಭಾರ­ತದ ಯೋಧರ ಸಂಖ್ಯೆಯನ್ನು ಕಡಿತಗೊಳಿಸ­ಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬದ್ಧತೆ ಪ್ರದರ್ಶಿಸದ ಚೀನಾ

ನವದೆಹಲಿ: ಲಡಾಖ್‌ ಗಡಿಯಲ್ಲಿ ವಾಸ್ತವ ಗಡಿ ರೇಖೆ ಕುರಿತು ಇರುವ ಗೊಂದಲ ನಿವಾರಿಸುವಂತೆ ಭಾರತ ಮುಂದಿಟ್ಟಿದ್ದ ಬೇಡಿಕೆಯನ್ನು ಚೀನಾ ಗಂಭೀರವಾಗಿ ಪರಿಗಣಿಸಿಲ್ಲ. ಮೂರು ದಿನಗಳ ಭಾರತ ಪ್ರವಾಸ ಮುಗಿಸಿ ಶುಕ್ರವಾರ ಸ್ವದೇಶಕ್ಕೆ ಮರಳುವ ಮುನ್ನ  ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ವಾಸ್ತವ ಗಡಿ ರೇಖೆ ಕುರಿತು ಇರುವ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಆದಷ್ಟು ಬೇಗ ಜಂಟಿ ಯತ್ನ ಆರಂಭಿಸು­ವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿಟ್ಟಿರುವ ಪ್ರಸ್ತಾಪಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡಲಿಲ್ಲ.
ಆದರೆ, ಜಂಟಿ ಹೇಳಿಕೆಯಲ್ಲಿ ದ್ವಿಪಕ್ಷೀಯ ಬಾಂಧವ್ಯದ ಅಭಿವೃದ್ಧಿಗೆ ಗಡಿ ವಿವಾದ ಬಗೆಹರಿಯುವುದು ಅಗತ್ಯ ಎಂದಷ್ಟೇ ಹೇಳಲಾಗಿದೆ.

ADVERTISEMENT

ಆದರೂ ಚೀನಾದ ಸೇನೆ (ಪಿಎಲ್‌ಎ) ವಾಸ್ತವ ಗಡಿ ರೇಖೆಗೆ ತಾಕಿದಂತಿರುವ ತನ್ನ ಭೂಪ್ರದೇಶ­ದಲ್ಲಿ ಠಿಕಾಣಿ ಮುಂದುವರಿಸಿರುವು-ದರಿಂದ ಭಾರ­ತದ ಸೇನೆಯು ಕಟ್ಟೆಚ್ಚರ ವಹಿಸಿದೆ. ಇದೇ ವೇಳೆ, ಡೆಮ್‌ಚಾಕ್‌ ಪ್ರದೇಶದಲ್ಲಿ ಆತಂಕ ಮುಂದು­ವರಿದೇ ಇದೆ. ಕಳೆದ ೧೨ ದಿನಗಳ ಹಿಂದೆ ಆ ಪ್ರದೇಶಕ್ಕೆ ನುಗ್ಗಿದ ಚೀನಾದ ಅಲೆ­ಮಾರಿ­ಗಳಾದ ‘ರೆಬೋಸ್‌’­ಗಳು ಇನ್ನೂ ಅಲ್ಲಿಂದ ಕದಲಿಲ್ಲ. ಭಾರತವು ಇಲ್ಲಿನ ಗ್ರಾಮೀಣ ಪ್ರದೇಶ­ಗಳ ಜನರ ನೀರಾವರಿ ಅನುಕೂಲಕ್ಕಾಗಿ ನಾಲೆ ನಿರ್ಮಾಣ ಮಾಡುತ್ತಿರುವುದನ್ನು ಪಿಎಲ್‌ಎ ಬೆಂಬ­ಲಿತ ‘ರೆಬೋಸ್‌’ಗಳು ವಿರೋಧಿಸುತ್ತಿದ್ದಾರೆ. ಇದೇ ವೇಳೆ, ಈ ಭಾಗದಲ್ಲಿ ಚೀನಾದ ಸೇನೆಯು ಭಾರತದ ಭೂಭಾಗದಲ್ಲಿ ಸುಮಾರು ೫೦೦ ಮೀಟರ್‌ಗಳಷ್ಟು ಒಳಗೆ ಬಂದಿದೆ.

ಚೀನಾದ ಸುಮಾರು ೬೦೦ ಸೈನಿಕರು ಗುರು­ವಾರ ಬೆಳಗಿನ ಜಾವ ಒಳನುಗ್ಗಿದ್ದರು. ಅಲ್ಲದೇ ಭಾರ­ತದ ಸೇನೆಗೆ ಆ ಪ್ರದೇಶದಿಂದ ಹೊರನಡೆ­ಯಲು ಸೂಚಿಸಿ ಬ್ಯಾನರ್‌ಗಳನ್ನು ಹಿಡಿದಿದ್ದರು. ಚೀನಾದ ಹೆಲಿಕಾಪ್ಟರ್‌ಗಳು ಹಗಲಿನಲ್ಲಿ ಕನಿಷ್ಠ ಮೂರು ಸಲ ಸೈನಿಕರಿಗೆ ಆಹಾರದ ಪೊಟ್ಟ­ಣ­ಗಳನ್ನು ಸುರಿದಿದ್ದವು ಎಂದು ಮೂಲಗಳು ತಿಳಿಸಿವೆ.

ವಾಸ್ತವ ಗಡಿ ರೇಖೆಗೆ ಹೊಂದಿಕೊಂಡ ತನ್ನ ಭೂಭಾಗದಲ್ಲಿ ಚೀನಾವು ರಸ್ತೆ ನಿರ್ಮಾಣ ನಡೆಸುತ್ತಿದೆ. ಈ ಕಾಮಗಾರಿಯಲ್ಲಿ ತೊಡಗಿದ್ದ­ವರು ಭಾನುವಾರ ಭಾರತದ ಗಡಿಯೊಳಕ್ಕೆ ನುಗ್ಗಿ­ದರು. ಭಾರತದ ಸೇನೆ ಇದಕ್ಕೆ ಆಕ್ಷೇಪ ವ್ಯಕ್ತ­ಪಡಿ­ಸಿತು. ಆದರೆ ಇದನ್ನು ಒಪ್ಪದ ರಸ್ತೆ ನಿರ್ಮಾಣ­ದಲ್ಲಿ ತೊಡಗಿದ್ದ ಚೀನಾ ಕಾರ್ಮಿಕರು ಟೈಬರ್‌­ವ­ರೆಗೂ ರಸ್ತೆ ಕಾಮಗಾರಿ ನಡೆಸುವಂತೆ ತಮಗೆ ಸೂಚಿ­ಸ­ಲಾಗಿದೆ ಎಂದರು. ಆದರೆ ಟೈಬರ್‌ ವಾಸ್ತವ ಗಡಿ ರೇಖೆಯಿಂದ ಐದು ಕಿ.ಮೀ. ಒಳಗೆ ಭಾರತದ ನೆಲದಲ್ಲಿರುವ ಪ್ರದೇಶವಾಗಿದೆ.

ಆಗ ಭಾರತದ ಯೋಧರು, ದೇಶವನ್ನು ಅಕ್ರ­ಮ­ವಾಗಿ ಪ್ರವೇಶಿಸಿದರೆ ಕಾನೂನಿನ ಪ್ರಕಾರ ವಿಚಾರಣೆ ಎದುರಿಸಬೇಕಾಗುತ್ತದೆಂದು ರಸ್ತೆ ನಿರ್ಮಾಣ­ದಲ್ಲಿ ತೊಡಗಿದ್ದವರಿಗೆ ಎಚ್ಚರಿಕೆ ನೀಡಿ­ದರು.  ಆದರೂ ಭಾನುವಾರ ಮಧ್ಯರಾತ್ರಿಯ ನಂತರ ಭಾರತದ ಸುಮಾರು ೧೦೦ ಸೈನಿಕರನ್ನು ಚೀನಾದ ೩೦೦ ಸೈನಿಕರು ಸುತ್ತುವರಿದರು. ಆಗ ಭಾರತ ಕೂಡ ಸೇನಾ ನಿಯೋಜನೆಯನ್ನು ತೀವ್ರಗೊಳಿಸಿ ಅತಿಕ್ರಮಣ ಯತ್ನವನ್ನು ಹಿಮ್ಮೆಟ್ಟಿಸಿತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.