ADVERTISEMENT

ಚೆನ್ನೈ ನಿಲ್ದಾಣದಲ್ಲಿ ಸ್ಫೋಟ

ಬೆಂಗಳೂರು– ಗುವಾಹಟಿ ರೈಲಿನಲ್ಲಿ ದುಷ್ಕೃತ್ಯ, ಟಿಸಿಎಸ್‌ ಉದ್ಯೋಗಿ ಸಾವು

​ಪ್ರಜಾವಾಣಿ ವಾರ್ತೆ
Published 1 ಮೇ 2014, 19:30 IST
Last Updated 1 ಮೇ 2014, 19:30 IST

ಚೆನ್ನೈ (ಪಿಟಿಐ): ಇಲ್ಲಿನ ಜನದಟ್ಟಣೆಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಬೆಂಗ­ಳೂರು– ಗುವಾಹಟಿ ರೈಲಿನಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಅವಳಿ ಸ್ಫೋಟದಲ್ಲಿ ಯುವತಿಯೊಬ್ಬರು ಸಾವಿ­ಗೀಡಾಗಿ, 14 ಜನರು ಗಾಯಗೊಂಡರು.

ಬೆಂಗಳೂರಿನ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸಸ್‌ನಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಆಂಧ್ರಪ್ರದೇಶದ ಗುಂಟೂರು ಮೂಲದ ಸ್ವಾತಿ (24) ಮೃತಪಟ್ಟ ದುರ್ದೈವಿ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿ ಇಲ್ಲಿಗೆ ಬಂದ ರೈಲು ಬೆಳಿಗ್ಗೆ 7.05ರ ವೇಳೆಗೆ 9ನೇ ಪ್ಲಾಟ್‌­ಫಾರ್ಮ್‌ಗೆ ಬಂದು ನಿಂತಿತು. ಅದು 10 ನಿಮಿಷ ಇಲ್ಲಿ ನಿಲುಗಡೆ ಮಾಡಿ ಮುಂದೆ ಹೊರ­ಡಬೇಕಿತ್ತು. ಅಷ್ಟರಲ್ಲಿ ಐದೇ ನಿಮಿಷಗಳ ಅಂತರದಲ್ಲಿ ಕಡಿಮೆ ತೀವ್ರತೆಯ ಎರಡು ಬಾಂಬ್‌ಗಳು ಸ್ಫೋಟಿಸಿದವು. ಒಂದು ಬಾಂಬ್‌ ಎಸ್‌4 ಸ್ಲೀಪರ್‌ ಬೋಗಿಯಲ್ಲಿ ಸ್ಫೋಟಿಸಿದರೆ ಮತ್ತೊಂದು ಬಾಂಬ್‌ ಎಸ್‌5 ಸ್ಲೀಪರ್‌ ಬೋಗಿಯಲ್ಲಿ ಸ್ಫೋಟಿಸಿತು.

ರೈಲು ಇನ್ನೇನು ನಿಲ್ದಾಣದಿಂದ ಮುಂದಕ್ಕೆ ಹೊರಡಲಿದೆ ಎಂಬ ಎಣಿಕೆಯಲ್ಲಿದ್ದ ಪ್ರಯಾಣಿಕರು ಸ್ಫೋಟ­ಗಳಿಂದ ಬೆಚ್ಚಿಬಿದ್ದು ಓಡಿ ಚದುರಿದರು.
ಗಾಯಗೊಂಡವರಿಗೆ ರಾಜೀವ್‌­ಗಾಂಧಿ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ನೀಡಲಾ­ಗುತ್ತಿದ್ದು, ‘ಎಲ್ಲರೂ ಪ್ರಾಣಾಪಾಯ­ದಿಂದ ಪಾರಾಗಿದ್ದಾರೆ’ ಎಂದು ವೈದ್ಯರು ತಿಳಿಸಿದ್ದಾರೆ.

ಪಾಕಿಸ್ತಾನದ ಐಎಸ್‌ಐ ಜತೆ ಸಂಪರ್ಕ ಹೊಂದಿದ ಸಂಶಯದ ಮೇಲೆ ಶ್ರೀಲಂಕಾ ಮೂಲದ ಶಂಕಿತ ಉಗ್ರನನ್ನು ಬಂಧಿಸಿದ ಎರಡೇ ದಿನಗಳಲ್ಲಿ ಈ ದುಷ್ಕೃತ್ಯ ನಡೆದಿದೆ.

ರಾಜ್ಯ ಪೊಲೀಸರಿಂದಲೇ ತನಿಖೆ: ಈ ಸ್ಫೋಟ ಸಂಚಿನ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ತಮಿಳುನಾಡು ಸರ್ಕಾರವು ಸದ್ಯಕ್ಕೆ ಈ ದುಷ್ಕೃತ್ಯವನ್ನು ಉಗ್ರರ ದಾಳಿ ಎಂದು ಪರಿಗಣಿಸಿಲ್ಲ.

ಸ್ಫೋಟದ ಬಗ್ಗೆ ಕೇಂದ್ರ ಸರ್ಕಾರದ ಸಂಸ್ಥೆಗಳ ತನಿಖಾ ನೆರವನ್ನು ಅದು ನಿರಾಕರಿಸಿದ್ದು, ರಾಜ್ಯ ಪೊಲೀಸರಿಂದಲೇ ತನಿಖೆ ನಡೆಸುವುದಾಗಿ ಹೇಳಿದೆ. ಇದೇ ವೇಳೆ ಕೇಂದ್ರದ ರೈಲ್ವೆ ಸಚಿವಾಲಯವು ಸ್ಫೋಟ ಕುರಿತ ಪರಿಶೀಲನೆಗೆ ಇಬ್ಬರು ಅಧಿಕಾರಿಗಳನ್ನು ಚೆನ್ನೈಗೆ ಕಳುಹಿಸಿದೆ.

‘ರೈಲು ಒಂದು ಗಂಟೆ ತಡವಾಗಿ ಇಲ್ಲಿಗೆ ಬಂದಿದೆ. ಹೀಗಾಗಿ ಬಹುಶಃ ಚೆನ್ನೈ ಸಂಚುಕೋರರ ಗುರಿ ಆಗಿಲ್ಲದಿರ­ಬಹು­ದು’ ಎಂಬುದು ಪೊಲೀಸರ ತರ್ಕ­ವಾಗಿದೆ. ಈ ಮಧ್ಯೆ ನಗರ ಪೊಲೀಸರು, ರೈಲ್ವೆ ಪೊಲೀಸರು, ವಿಧಿವಿಜ್ಞಾನ ತಜ್ಞರು ಮತ್ತು ಬಾಂಬ್‌ ನಿಷ್ಕ್ರಿಯ ದಳದ ಸದಸ್ಯರು ಸ್ಥಳಕ್ಕೆ ತೆರಳಿ ರೈಲಿನ ಬೋಗಿಗಳ ಶೋಧನೆ ನಡೆಸಿದರು.

‘ಸ್ಫೋಟಕಗಳಲ್ಲಿ ಏನು ಬಳಕೆಯಾ­ಗಿದೆ ಎಂಬುದನ್ನು ಈಗಲೇ ಹೇಳುವುದು ಸೂಕ್ತವಲ್ಲ. ರೈಲಿಗೆ ದೊಡ್ಡಮಟ್ಟದ ಹಾನಿ ಆಗಿಲ್ಲ’ ಎಂದು ತಮಿಳುನಾಡು ಪೊಲೀಸ್‌ ಮಹಾನಿರ್ದೇಶಕ ಕೆ.ರಾಮಾನುಜಂ ಹೇಳಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಸಿಬಿ– ಸಿಐಡಿ (ಗಂಭೀರ ಅಪರಾಧಗಳ ತನಿಖಾ ವಿಭಾಗ) ತನಿಖೆಗೆ ಆದೇಶಿಸಿದ್ದಾರೆ.

ಹೊರಟ ರೈಲು: ಸ್ಫೋಟದಿಂದಾಗಿ ನಿಲುಗಡೆಯಾಗಿದ್ದ ರೈಲು ಮಧ್ಯಾಹ್ನ 12.15ಕ್ಕೆ ಗುವಾ­ಹಟಿಗೆ ಹೊರಟಿತು. ಪೊಲೀಸರು ವ್ಯಾಪಕ ಶೋಧ ನಡೆಸಿದ ನಂತರ, ರೈಲ್ವೆ ಇಲಾಖೆಯು ಹಾನಿ­ಗೀಡಾದ ಎಸ್‌3, ಎಸ್‌4 ಮತ್ತು ಎಸ್‌5 ಬೋಗಿಗಳನ್ನು ಬದಲಾಯಿಸಿತು. ಇದಾಗುತ್ತಿದ್ದಂತೆ ರೈಲು ಹೊರಟಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.