ADVERTISEMENT

ಜನರನ್ನು ಉಪೇಕ್ಷಿಸಬೇಡಿ: ಸೇನೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 10:07 IST
Last Updated 1 ನವೆಂಬರ್ 2014, 10:07 IST

ಮುಂಬೈ (ಪಿಟಿಐ): ಜನರನ್ನು ನಿರ್ಲಕ್ಷಿಸದಂತೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‍ ಅವರಿಗೆ ಶನಿವಾರ ಎಚ್ಚರಿಕೆಯ ಕಿವಿಮಾತು ಹೇಳಿರುವ ಶಿವಸೇನೆ, ಶ್ರೀಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವಂತೆ ತಿಳಿಸಿದೆ.

‘ಹೊಸ ಸರ್ಕಾರ ಅತ್ತೆಯನ್ನು ಸಂತೋಷ ಪಡಿಸುವ ಹೊಸ ಸೊಸೆಯಂತೆ. ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಜನತೆಯೇ ಅತ್ತೆ. ನೀವು ಜನರನ್ನು ಉಪೇಕ್ಷಿಸಬೇಡಿ. ನೀವು ತಪ್ಪು ಮಾಡಿದಾಗ ನಿಮ್ಮ ಕಿವಿಯನ್ನು ಹಿಂಡುವ ಅಧಿಕಾರ ಅವರ ಬಳಿಯಿದೆ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.

ಹೊಸ ಸರ್ಕಾರ ಕಲಿಯಬೇಕಾಗಿರುವ ಮೊದಲ ಪಾಠವಿದು ಎಂದೂ ಸೇನೆಯು ಹೇಳಿದೆ. ಈ ಮೂಲಕ ಬಿಜೆಪಿ ಜತೆಗಿನ ಮರುಮೈತ್ರಿಯ ಸುಳಿವನ್ನು ನಿಚ್ಚಳವಾಗಿಸಿದೆ.

ADVERTISEMENT

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಕೆಲವಾರಗಳ ಮುಂಚೆ ಅಂದರೆ ಸೆಪ್ಟಂಬರ್ 25ರಂದು 25 ವರ್ಷಗಳ ಮೈತ್ರಿಯನ್ನು ಬಿಜೆಪಿ ಹಾಗೂ ಶಿವಸೇನೆ ಕಡಿದುಕೊಂಡಿದ್ದವು.

ಚುನಾವಣೆ ಸಮಯದಲ್ಲಿ ನೀಡಲಾದ ಭರವಸೆಗಳ ಪೂರೈಸಲು ಯಾವುದೇ ಮಂತ್ರ ದಂಡವಿಲ್ಲ ಎಂಬುದು ಸತ್ಯ. ಆದರೆ ಮಹಾರಾಷ್ಟ್ರದ ಜನತೆ ಬಿಜೆಪಿ ನೇತೃತ್ವದ ಮೊದಲ ಸರ್ಕಾರದತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ ಎಂದೂ ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಕಾಂಗ್ರೆಸ್‍- -ಎನ್‌ಸಿಪಿ ಆಡಳಿತದಲ್ಲಿ ಮಂತ್ರಾಲಯ (ಮಹಾರಾಷ್ಟ ಸಚಿವಾಲಯ) ಭಸ್ಮವಾಗಿತ್ತು. ಅದಕ್ಕೂ ಮೊದಲೇ ಜನರ ನಿರೀಕ್ಷೆಗಳು ಬೂದಿಯಾಗಿ ಬದಲಾಗಿದ್ದವು. ಬೂದಿಯಿಂದ ಎದ್ದು ಬರುವ ಫಿನಿಕ್ಸ್ ಹಕ್ಕಿಯಂತೆ ಕೆಲಸ ಮಾಡುವುದಾಗಿ ಹೊಸ ಮುಖ್ಯಮಂತ್ರಿಗಳು ಖಚಿತಪಡಿಸಬೇಕು’ ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.