ADVERTISEMENT

ಜಯಾ ಬಂಗಲೆ ಕಾವಲುಗಾರನ ಕೊಲೆ ಶಂಕಿತರಿಗೆ ಅಪಘಾತ: ಒಬ್ಬ ಸಾವು, ಮತ್ತೊಬ್ಬ ಗಂಭೀರ

ಪಿಟಿಐ
Published 29 ಏಪ್ರಿಲ್ 2017, 19:30 IST
Last Updated 29 ಏಪ್ರಿಲ್ 2017, 19:30 IST
ಜಯಾ ಬಂಗಲೆ ಕಾವಲುಗಾರನ ಕೊಲೆ ಶಂಕಿತರಿಗೆ ಅಪಘಾತ: ಒಬ್ಬ ಸಾವು, ಮತ್ತೊಬ್ಬ ಗಂಭೀರ
ಜಯಾ ಬಂಗಲೆ ಕಾವಲುಗಾರನ ಕೊಲೆ ಶಂಕಿತರಿಗೆ ಅಪಘಾತ: ಒಬ್ಬ ಸಾವು, ಮತ್ತೊಬ್ಬ ಗಂಭೀರ   

ತಿರುವನಂತಪುರ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಂಗಲೆಯ ಕಾವಲುಗಾರನ ನಿಗೂಢ ಕೊಲೆಯ ಆರೋಪಿಗಳಿಬ್ಬರು ಪ್ರತ್ಯೇಕ ರಸ್ತೆ ಅಪಘಾತಕ್ಕೆ ತುತ್ತಾಗಿದ್ದಾರೆ. ಕೆಲವೇ ತಾಸುಗಳ ಅಂತರದಲ್ಲಿ ಈ ಎರಡು ಅಪಘಾತಗಳು ನಡೆದಿರುವುದು  ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. 

ಪ್ರಮುಖ ಶಂಕಿತ ಕನಕರಾಜ್‌ ಅಪಘಾತದಲ್ಲಿ ಮೃತಪಟ್ಟರೆ ಮತ್ತೊಬ್ಬ ಶಂಕಿತ ಸಯಾನ್‌ ಅಲಿಯಾಸ್‌ ಶ್ಯಾಮ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ಯಾಮ್‌ ಅವರ ಹೆಂಡತಿ ಮತ್ತು ಐದು ವರ್ಷದ ಮಗಳು ಅಪಘಾತದಲ್ಲಿ ಸತ್ತಿದ್ದಾರೆ.

ಕನಕರಾಜ್‌ ಅವರು ಜಯಲಲಿತಾ ಅವರ ಕಾರು ಚಾಲಕನಾಗಿ ಕೆಲಸ ಮಾಡಿದ್ದರು. ಮೂರು ವರ್ಷದ ಹಿಂದೆ ಅವರನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು.

ADVERTISEMENT

ಶ್ಯಾಮ್‌ ಅವರು ಸಂಚರಿಸುತ್ತಿದ್ದ ಕಾರು ತ್ರಿಶೂರ್‌–ಪಾಲಕ್ಕಾಡ್‌ ಹೆದ್ದಾರಿಯ ಕನ್ನಾಡಿ ಜಂಕ್ಷನ್‌ನಲ್ಲಿ ನಿಂತಿದ್ದ ಲಾರಿಗೆ ಶನಿವಾರ ಬೆಳಗ್ಗಿನ ಜಾವ ಡಿಕ್ಕಿ ಹೊಡೆದಿದೆ. 

ಕನಕರಾಜ್‌ ಅವರ ದ್ವಿಚಕ್ರ ವಾಹನಕ್ಕೆ  ತಮಿಳುನಾಡಿನ ಸೇಲಂ ಜಿಲ್ಲೆಯ ಆತೂರ್‌ ಎಂಬಲ್ಲಿ ಶುಕ್ರವಾರ ತಡರಾತ್ರಿ ಕಾರು ಡಿಕ್ಕಿ ಹೊಡೆಯಿತು.

ಕೇರಳದ ಕೋಡನಾಡು ಎಂಬಲ್ಲಿರುವ ಬಂಗಲೆಯ ಕಾವಲುಗಾರನ ಕೊಲೆ ಪ್ರಕರಣದಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರು ನೀಡಿದ ಮಾಹಿತಿ ಪ್ರಕಾರ ಕನಕರಾಜ್‌ ಮತ್ತು ಶ್ಯಾಮ್‌ ಪ್ರಮುಖ ಶಂಕಿತರು ಎಂದು ಪೊಲೀಸರು ತಿಳಿಸಿದ್ದಾರೆ.

ಜಯಲಲಿತಾ ಅವರು ಆಗಾಗ ಈ ಬಂಗಲೆಗೆ ಭೇಟಿ ನೀಡುತ್ತಿದ್ದರು. ಈ ಬಂಗಲೆಯ ಕಾವಲುಗಾರ ಇದೇ 24ರಂದು ಕೊಲೆಯಾಗಿದ್ದರು. ಬಂಗಲೆಯೊಳಗೆ ಅತಿಕ್ರಮ ಪ್ರವೇಶ ಮಾಡಿದ್ದ ದುಷ್ಕರ್ಮಿಗಳು ಮಹತ್ವದ ದಾಖಲೆಗಳನ್ನು ಒಯ್ದಿರಬಹುದು ಎಂದು ಶಂಕಿಸಲಾಗಿದೆ.

ಬಂಗಲೆಯ ಒಂದು ಬಾಗಿಲು ಮುರಿದು ದುಷ್ಕರ್ಮಿಗಳು ಒಳ ಪ್ರವೇಶಿಸಿದ್ದರು. ಬಂಗಲೆಯೊಳಗಿದ್ದ ಎರಡು ಸೂಟ್‌ಕೇಸ್‌ಗಳನ್ನು ಮುರಿಯಲಾಗಿದೆ.

ಜಯಲಲಿತಾ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರು ಗಳಿಸಿರುವ ಅಕ್ರಮ ಆಸ್ತಿಯ ಪಟ್ಟಿಯಲ್ಲಿ ಈ ಬಂಗಲೆಯೂ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.