ADVERTISEMENT

ಜಲ್ಲಿಕಟ್ಟು: ಜನರ ಜಯ

ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ

ಪಿಟಿಐ
Published 22 ಜನವರಿ 2017, 4:21 IST
Last Updated 22 ಜನವರಿ 2017, 4:21 IST
ಜಲ್ಲಿಕಟ್ಟು ಮೇಲಿನ ನಿರ್ಬಂಧ ವಿರೋಧಿಸಿ ಚೆನ್ನೈನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಿತ್ತಿಪತ್ರ ಪ್ರದರ್ಶಿಸಿದರು      –ಎಎಫ್‌ಪಿ ಚಿತ್ರ
ಜಲ್ಲಿಕಟ್ಟು ಮೇಲಿನ ನಿರ್ಬಂಧ ವಿರೋಧಿಸಿ ಚೆನ್ನೈನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಭಿತ್ತಿಪತ್ರ ಪ್ರದರ್ಶಿಸಿದರು –ಎಎಫ್‌ಪಿ ಚಿತ್ರ   

ಚೆನ್ನೈ: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ, ಮೂರು ವರ್ಷಗಳ ನಿಷೇಧದ ನಂತರ, ಭಾನುವಾರ ಅದ್ದೂರಿ ಚಾಲನೆ ದೊರೆಯಲಿದೆ. ಜಲ್ಲಿಕಟ್ಟು ಸ್ಪರ್ಧೆ ಆಯೋಜಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಶನಿವಾರ ಸಹಿ ಮಾಡಿದ್ದಾರೆ.

ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಮಾಡಿರುವ ವಿಷಯವನ್ನು ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಪ್ರಕಟಿಸಿದರು. ಮದುರೈನ ಅಳಂಗನಲ್ಲೂರಿನಲ್ಲಿ ನಡೆಯಲಿರುವ ಜಲ್ಲಿಕಟ್ಟು ಸ್ಪರ್ಧೆಯನ್ನು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪನ್ನೀರಸೆಲ್ವಂ ಉದ್ಘಾಟಿಸಲಿದ್ದಾರೆ.

ತಮಿಳುನಾಡಿನ ಆಗ್ರಹಕ್ಕೆ ತ್ವರಿತವಾಗಿ ಸ್ಪಂದಿಸಿದ ಕೇಂದ್ರ ಸರ್ಕಾರ, ಜಲ್ಲಿಕಟ್ಟು ಸುಗ್ರೀವಾಜ್ಞೆಗೆ ಶುಕ್ರವಾರ ರಾತ್ರಿ ಸಮ್ಮತಿ ನೀಡಿತು. ಮಹಾರಾಷ್ಟ್ರದ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು (ತಮಿಳುನಾಡಿನ ರಾಜ್ಯಪಾಲರಾಗಿ ಹೆಚ್ಚುವರಿ ಹೊಣೆ ಹೊತ್ತಿದ್ದಾರೆ), ಸುಗ್ರೀವಾಜ್ಞೆಗೆ ಅಂಕಿತ ಹಾಕಲು ಶನಿವಾರ ಸಂಜೆ ಚೆನ್ನೈಗೆ ಧಾವಿಸಿದರು.

ಆದರೆ, ಜಲ್ಲಿಕಟ್ಟು ಸ್ಪರ್ಧೆಯ ಪರವಾಗಿ ಚೆನ್ನೈನ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು, ‘ಸುಗ್ರೀವಾಜ್ಞೆ ಸಾಕಾಗದು, ಶಾಶ್ವತ ಪರಿಹಾರ ಬೇಕು’ ಎಂದು ಒತ್ತಾಯಿಸಿದ್ದಾರೆ.

ತಮಿಳುನಾಡಿನ ಇತರೆಡೆ ಕೂಡ ಭಾನುವಾರ ಜಲ್ಲಿಕಟ್ಟು ಸ್ಪರ್ಧೆ ನಡೆಯಲಿದೆ ಎಂದು ಪನ್ನೀರಸೆಲ್ವಂ ತಿಳಿಸಿದರು. 2014ರಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಜಲ್ಲಿಕಟ್ಟು ನಿಷೇಧಕ್ಕೆ ಒಳಗಾಗಿತ್ತು. ‘ಯುವಕರು, ವಿದ್ಯಾರ್ಥಿಗಳು, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಜಲ್ಲಿಕಟ್ಟು ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕು’ ಎಂದು ಪನ್ನೀರಸೆಲ್ವಂ ಮನವಿ ಮಾಡಿದರು.

ಜಲ್ಲಿಕಟ್ಟು ಸ್ಪರ್ಧೆಯನ್ನು ಯಾವುದೇ ಅಡಚಣೆ ಇಲ್ಲದೆ ನಡೆಸಲು ಅವಕಾಶ ಕಲ್ಪಿಸುವ, ಪ್ರಾಣಿಹಿಂಸೆ ತಡೆ ತಿದ್ದುಪಡಿ ಮಸೂದೆಯನ್ನು ಸೋಮವಾರದಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಪನ್ನೀರಸೆಲ್ವಂ ತಿಳಿಸಿದರು.

ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುವ ಮೊದಲು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ತಮಿಳುನಾಡಿನ ಶ್ರೀಮಂತ ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆ ಇದೆ. ಅಲ್ಲಿನ ಜನರ ಸಾಂಸ್ಕೃತಿಕ ಆಕಾಂಕ್ಷೆಗಳನ್ನು ಈಡೇರಿಸಲು ಸರ್ವ ಪ್ರಯತ್ನ ನಡೆಸಲಾಗಿದೆ’ ಎಂದಿದ್ದರು.

‘ಈಗ ನಾವು ತಂದಿರುವ ಸುಗ್ರೀವಾಜ್ಞೆಯನ್ನು ಮುಂದೊಂದು ದಿನ ಸುಪ್ರೀಂ ಕೋರ್ಟ್‌ ರದ್ದು ಮಾಡಬಹುದು. ಹಾಗಾಗಿ, ಪ್ರಾಣಿ ಹಿಂಸೆ ತಡೆ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸುವ ಭರವಸೆ ನಮಗೆ ಕೇಂದ್ರದಿಂದ ಬೇಕು’ ಎಂದು ಪಿಎಂಕೆ ಯುವ ವಿಭಾಗದ ಅಧ್ಯಕ್ಷ ಅನ್ಬುಮಣಿ ರಾಮದಾಸ್ ಆಗ್ರಹಿಸಿದರು.

ಪ್ರಧಾನಿಗೆ ಪತ್ರ: ಜಲ್ಲಿಕಟ್ಟು ವಿಚಾರದಲ್ಲಿ ತಮಿಳುನಾಡಿನ ಬೆಂಬಲಕ್ಕೆ ನಿಂತಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪನ್ನೀರಸೆಲ್ವಂ ಅಭಿನಂದನೆ ಸಲ್ಲಿಸಿದ್ದಾರೆ.
*
ಪ್ರಮುಖ ಬೆಳವಣಿಗೆ
* ಪ್ರಾಣಿಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದು ಶುಕ್ರವಾರ ರಾತ್ರಿ ಸಿ.ಎಂ ಕೈಸೇರಿತು.

* ಶನಿವಾರ ಬೆಳಿಗ್ಗೆ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡಿನ ಜನರ ಆಕಾಂಕ್ಷೆ ಗಳನ್ನು ಈಡೇರಿಸಲು ಸಕಲ ಪ್ರಯತ್ನ ನಡೆದಿದೆ ಎಂದರು.

* ಮಹಾರಾಷ್ಟ್ರದಿಂದ ಚೆನ್ನೈಗೆ ಧಾವಿಸಿದ ರಾಜ್ಯಪಾಲ ವಿದ್ಯಾಸಾಗರ ರಾವ್. ಸುಗ್ರೀವಾಜ್ಞೆಗೆ ಶನಿವಾರ ಸಂಜೆ ಅಂಕಿತ.

* ಪ್ರಾಣಿಹಿಂಸೆ ತಡೆ ತಿದ್ದುಪಡಿ ಮಸೂದೆಯನ್ನು ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಮಂಡಿಸುವುದಾಗಿ ಪನ್ನೀರಸೆಲ್ವಂ ಹೇಳಿಕೆ.

* ತಮಿಳುನಾಡಿನಲ್ಲಿ ‘ಪೆಟಾ’ ಸಂಘಟನೆ ನಿಷೇಧಕ್ಕೆ ರಾಜ್ಯ ಸರ್ಕಾರದ ಚಿಂತನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.