ADVERTISEMENT

ಜೆಎನ್‌ಯು ವಿವಾದ: ಸರ್ವಪಕ್ಷ ಸಭೆಯಲ್ಲೂ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2016, 4:24 IST
Last Updated 17 ಫೆಬ್ರುವರಿ 2016, 4:24 IST
ಜೆಎನ್‌ಯು ವಿವಾದ: ಸರ್ವಪಕ್ಷ ಸಭೆಯಲ್ಲೂ ಪ್ರತಿಧ್ವನಿ
ಜೆಎನ್‌ಯು ವಿವಾದ: ಸರ್ವಪಕ್ಷ ಸಭೆಯಲ್ಲೂ ಪ್ರತಿಧ್ವನಿ   

ನವದೆಹಲಿ (ಪಿಟಿಐ): ಜೆಎನ್‌ಯು ವಿವಾದ ಮಂಗಳವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ದೇಶದ್ರೋಹ ಆರೋಪದಡಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕರೊಬ್ಬರನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ಜೆಎನ್‌ಯು ವಿದ್ಯಾರ್ಥಿಗಳ ಹೋರಾಟಕ್ಕೆ ಜೆಎನ್‌ಯು ಉಪನ್ಯಾಸಕರು ಹಾಗೂ ಜಾಗತಿಕ ವಿವಿಗಳು ಬೆಂಬಲ ಸೂಚಿಸಿವೆ. ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸರ್ವಪಕ್ಷ ಸಭೆಯಲ್ಲಿ ಈ ವಿವಾದ ಪ್ರತಿಧ್ವನಿಸಿದೆ.

ನಸುಕಿನಲ್ಲಿ ಬಂಧನ: ವಿವಾದ ಸಂಬಂಧ ದೇಶದ್ರೋಹ ಆರೋಪದಡಿ ದೆಹಲಿ ವಿಶ್ವ ವಿದ್ಯಾಲಯದ ಮಾಜಿ ಉಪನ್ಯಾಸಕ ಎಸ್‌ಎಆರ್‌ ಗಿಲಾನಿ ಅವರನ್ನು ಮಂಗಳವಾರ ನಸುಕಿನಲ್ಲಿ ಬಂಧಿಸಲಾಗಿದೆ.

‘ಗಿಲಾನಿ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್‌ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ನಸುಕಿನ 3 ಗಂಟೆಗೆ ಐಪಿಸಿಯ 124ಎ (ದೇಶದ್ರೋಹ), 120ಬಿ (ಕ್ರಿಮಿನಲ್ ಪಿತೂರಿ) ಹಾಗೂ 149 ಕಲಂಗಳಡಿ ಬಂಧಿಸಲಾಗಿದೆ’ ಎಂದು ಡಿಸಿಪಿ ಜತಿನ್ ನರ್ವಾಲ್ ತಿಳಿಸಿದ್ದಾರೆ.‌‌

ADVERTISEMENT

ಜಾಗತಿಕ ವಿವಿಗಳ ಬೆಂಬಲ: ಇನ್ನು, ವಿವಾದ ಸಂಬಂಧ ಜಾಗತಿಕ ವಿಶ್ವವಿದ್ಯಾಲಯಗಳು ಜೆಎನ್‌ಯುಗೆ ಬೆಂಬಲ ವ್ಯಕ್ತಪಡಿಸಿವೆ.

ಕೊಲಂಬಿಯಾ, ಯಾಲೆ, ಹಾರ್ವರ್ಡ್‌ ಹಾಗೂ ಕೇಂಬ್ರಿಡ್ಜ್‌ ಸೇರಿದಂತೆ ಜಾಗತಿಕ ವಿಶ್ವವಿದ್ಯಾಲಯಗಳ 455 ವಿದ್ಯಾರ್ಥಿಗಳು ಸಹಿಗಳುಳ್ಳ ಜಂಟಿ ಪ್ರಕಟಣೆಯ ಮೂಲಕ ಬೆಂಬಲ ಸೂಚಿಸಿದ್ದಾರೆ.

ಉಪನ್ಯಾಸಕರೂ ಧರಣಿ ಕಣಕ್ಕೆ: ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ದೇಶದ್ರೋಹದ ಆರೋಪದಡಿ ಬಂಧಿಸಿರುವುದನ್ನು ವಿರೋಧಿ ವಿದ್ಯಾರ್ಥಿಗಳು ನಡೆಸುತ್ತಿರುವ ತರಗತಿ ಬಹಿಷ್ಕಾರ ಚಳವಳಿಗೆ ಮಂಗಳವಾರ ಉಪನ್ಯಾಸಕರು ಧುಮುಕಿದ್ದಾರೆ.

ವಿಶ್ವ ವಿದ್ಯಾಲಯದ ಹುಲ್ಲುಹಾಸಿನ ಮೇಲೆ ‘ರಾಷ್ಟ್ರೀಯತೆ’ ಕುರಿತ ಪಾಠ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಕನ್ಹಯಾ ವಿಚಾರಣೆಯ ವೇಳೆ ಸೋಮವಾರ 10 ಉಪನ್ಯಾಸಕರು ಹಾಗೂ ಒಂದಿಷ್ಟು ವಿದ್ಯಾರ್ಥಿಗಳ ಮೇಲೆ ಪಟಿಯಾಲ್ ಹೌಸ್ ಕೋರ್ಟ್‌ನಲ್ಲಿ ಹಲ್ಲೆ ನಡೆದ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.

ಪ್ರಧಾನಿಗೆ ಬಿಸಿ: ಮತ್ತೊಂದೆಡೆ, ಸಂಸತ್ತಿನ ಬಜೆಟ್‌ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲೂ ಜೆಎನ್‌ಯು ವಿವಾದ ಪ್ರತಿಧ್ವನಿಸಿದೆ. ಫೆಬ್ರುವರಿ 23ರಿಂದ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ.

ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿರೋಧ ಪಕ್ಷಗಳು ಜೆಎನ್‌ಯು ವಿವಾದ ಪ್ರಸ್ತಾಪಿಸಿದವು. ‘ವಿರೋಧ ಪಕ್ಷಗಳು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ನಾವು ಉತ್ತರಿಸುತ್ತೇವೆ ಹಾಗೂ ಅವುಗಳನ್ನು ಪರಿಹರಿಸುತ್ತೇವೆ’ ಎಂದು ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್‌ ನಕಾರ: ಇನ್ನು, ಜೆಎನ್‌ಯು ವಿವಾದಿತ ದೇಶದ್ರೋಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ(ಎನ್‌ಐಎ) ತನಿಖೆ ನಡೆಸುವಂತೆ ಮಾಡಿದ್ದ ಮನವಿಯನ್ನು ದೆಹಲಿ ಹೈಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

‘ಫೆಬ್ರುವರಿ 9ರ ಈ ಘಟನೆಯನ್ನು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರಿಗೆ ಮೊದಲು ತನಿಖೆ ಮಾಡಲು ಬಿಡಿ. ಅಗತ್ಯ ಕಾಣವ ತನಕ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಈ ಹಂತದಲ್ಲಿ ರಿಟ್ ಅರ್ಜಿ ಸಲ್ಲಿಸುವುದು ಆತುರ ಎನಿಸಿಕೊಳ್ಳುತ್ತದೆ’ ಎಂದು ನ್ಯಾಯಮೂರ್ತಿ ಮನಮೋಹನ್ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿತು.

ಕಾಂಗ್ರೆಸ್‌ ಕಿಡಿ: ನ್ಯಾಯಾಲಯದ ಆವರಣದಲ್ಲಿ ಸೋಮವಾರ ಉಪನ್ಯಾಸಕರು ಹಾಗೂ ಪತ್ರಕರ್ತರು ಮೇಲಿನ ಹಲ್ಲೆಯನ್ನ ಖಂಡಿಸಿರುವ ಕಾಂಗ್ರೆಸ್‌, ಇದು ‘ದಬ್ಬಾಳಿಕೆಯ ಕೃತ್ಯ’ ಎಂದು ಜರೆದಿದೆ.

‘ನ್ಯಾಯಾಲಯದ ಆವರಣದಲ್ಲಿ ಜೆಎನ್‌ಯು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪತ್ರಕರ್ತರ ಮೇಲಿನ ಹಲ್ಲೆ ಘಟನೆಯು ದಬ್ಬಾಳಿಕೆಯ ಕೃತ್ಯ. ಇದನ್ನು ಕಾಂಗ್ರೆಸ್‌ ಖಂಡಿಸುತ್ತದೆ’ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರು ಸರಣಿಯಾಗಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.