ADVERTISEMENT

ಟಾಟಾ, ಮಿಸ್ತ್ರಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2014, 19:30 IST
Last Updated 3 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ):  ಉದ್ಯಮಿಗಳ ಪರ ಲಾಬಿ ನಡೆಸುತ್ತಿದ್ದ ನೀರಾ ರಾಡಿಯಾ ದೂರವಾಣಿ ಕದ್ದಾಲಿಕೆ  ಪ್ರಕರ­ಣದ ಪ್ರಾಥಮಿಕ ತನಿಖೆಗೆ ಸಂಬಂಧಿಸಿ ಟಾಟಾ ಸನ್ಸ್ ಲಿಮಿಟೆಡ್‌ ಮಾಜಿ ಅಧ್ಯಕ್ಷ ರತನ್‌್ ಟಾಟಾ ಹಾಗೂ ಈಗಿನ ಅಧ್ಯಕ್ಷ ಸೈರಸ್‌್  ಮಿಸ್ತ್ರಿ ಅವರನ್ನು ಸಿಬಿಐ ಪ್ರಶ್ನಿಸಲಿದೆ.

‘ತನಿಖಾ ಸಂಸ್ಥೆ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಟಾಟಾ ಸಮೂ­ಹ­ವನ್ನು ಹೆಸರಿಸಲಾಗಿದೆ. ಟಾಟಾ ಹಾಗೂ ಮಿಸ್ತ್ರಿ ಅವರಿಂದ ಶೀಘ್ರವೇ ಸ್ಪಷ್ಟನೆ ಕೇಳಲಾ­ಗುತ್ತದೆ’ ಎಂದು ಸಿಬಿಐ ಮೂಲಗಳು ತಿಳಿಸಿವೆ. ಈ ಬಗ್ಗೆ  ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್‌ ವಕ್ತಾರರು, ‘ನಮಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದಿದ್ದಾರೆ.

ಜವಾಹರ ಲಾಲ್‌ ನೆಹರೂ  ರಾಷ್ಟ್ರೀಯ ನಗರ ನವೀಕರಣ ಯೋಜನೆ (ಜೆಎನ್‌ಎನ್‌­ಯುಆರ್‌ಎಂ)ಅಡಿ ತಮಿಳುನಾಡು ಸರ್ಕಾರಕ್ಕೆ ಟಾಟಾ ಮೋಟಾರ್ಸ್‌  ಬಸ್‌ಗಳನ್ನು ಒದಗಿಸಿ­ದ್ದು, ಈ ವಿಷಯಕ್ಕೆ ಸಂಬಂಧಿಸಿ ಸಿಬಿಐ ಚೆನ್ನೈ ಶಾಖೆ ತನಿಖೆ ನಡೆಸುತ್ತಿದೆ.

‘ಜಾರ್ಖಂಡ್‌ನ ಸಿಂಗ್‌ಭೂಮ್‌ ಜಿಲ್ಲೆಯ ಅಂಕುವಾದಲ್ಲಿ ಟಾಟಾ ಸ್ಟೀಲ್‌ ಕಂಪೆನಿಗೆ ನೀಡಿದ ಕಬ್ಬಿಣದ ಅದಿರು ಗಣಿ ಗುತ್ತಿಗೆ ಕೂಡ ಸಿಬಿಐ ತನಿಖೆಯಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

‘ಅಕ್ರಮ ನಡೆದಿರುವುದು ಕಂಡುಬಂದಿಲ್ಲ. ರಾಡಿಯಾ ದೂರವಾಣಿ ಸಂಭಾಷಣೆ­ಯಲ್ಲಿ ಈ ಗುತ್ತಿಗೆಗಳ ಪ್ರಸ್ತಾಪವಿದೆ. ಆದ್ದರಿಂದ ಕೆಲವು ವಿಷಯಗಳಿಗೆ ಸಂಬಂಧಿಸಿ ಟಾಟಾ ಹಾಗೂ ಮಿಸ್ತ್ರಿ ಅವರಿಂದ ಸ್ಪಷ್ಟನೆ ಕೇಳಲಾಗುತ್ತದೆ.  ಸುದ್ದಿವಾಹಿನಿ­ಯೊಂದರ ಪ್ರತಿನಿಧಿ ಹಾಗೂ ಪ್ರಮುಖ ಪತ್ರಿಕೆಯೊಂದರ  ಕಾರ್ಯನಿರ್ವಹಣಾ­ಧಿ­ಕಾರಿ­ಯನ್ನು ಈಗಾಗಲೇ ಪ್ರಶ್ನಿಸಲಾಗಿದೆ. ಅಲ್ಲದೇ, ರಿಲಯನ್ಸ್‌, ಯುನಿಟೆಕ್‌, ಟಾಟಾ ಮೋಟಾರ್ಸ್‌ ಕಾರ್ಯನಿರ್ವಹಣಾಧಿಕಾರಿಗಳನ್ನೂ ಪ್ರಶ್ನಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.