ADVERTISEMENT

ತಂತಿ ಬೇಲಿ ಕತ್ತರಿಸಿ ನುಗ್ಗಿದ್ದ ಲಷ್ಕರ್‌ ಉಗ್ರರು

ಪಿಟಿಐ
Published 21 ಸೆಪ್ಟೆಂಬರ್ 2016, 19:30 IST
Last Updated 21 ಸೆಪ್ಟೆಂಬರ್ 2016, 19:30 IST

ಉರಿ (ಪಿಟಿಐ): ಇಲ್ಲಿನ ಸೇನಾ ನೆಲೆಯ ಮೇಲೆ ಭಾನುವಾರ ದಾಳಿ ನಡೆಸಿ 18 ಯೋಧರ ಸಾವಿಗೆ ಕಾರಣರಾದ ನಾಲ್ವರು  ಉಗ್ರರು ಲಷ್ಕರ್‌–ಎ–ತಯಬಾ ಸಂಘಟನೆಗೆ ಸೇರಿದವರು ಎಂಬುದನ್ನು ತನಿಖೆ ಖಚಿತಪಡಿಸಿದೆ. ಭಾರಿ ಭದ್ರತೆಯ ಸೇನಾ ಶಿಬಿರದ ಹೊರಗಿನ ತಂತಿ ಬೇಲಿಯನ್ನು ಕತ್ತರಿಸಿ ಉಗ್ರರು ಒಳ ನುಗ್ಗಿದ್ದಾರೆ ಎಂಬ ಅಂಶವೂ ತಿಳಿದು ಬಂದಿದೆ.

ನಿಯಂತ್ರಣ ರೇಖೆಯ ಸಮೀಪದಲ್ಲಿರುವ ಸೇನಾ ನೆಲೆಯ ಬಗ್ಗೆ ಉಗ್ರರಿಗೆ ಸಮಗ್ರ ಜ್ಞಾನ ಇತ್ತು. ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗೆ ಉಗ್ರರು ಹೊರಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ ನಂತರ ಯೋಧರು ಅಲ್ಲಿಂದ ಹೊರಬರಲಾಗದಂತೆ ಮಾಡಿದ್ದರು ಎಂಬ ಅಂಶವೂ ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಸೇನಾ ಶಿಬಿರದೊಳಕ್ಕೆ ನುಗ್ಗಿದ ನಂತರ ಉಗ್ರರು ಅತ್ಯಂತ ನಿಖರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಹಾಗಾಗಿ ಉಗ್ರರಿಗೆ ‘ಒಳಗಿನವರ ನೆರವು’ ಇತ್ತು ಎಂಬುದನ್ನು ಅಲ್ಲಗಳೆಯಲಾಗದು. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗೆ ಹೊರಗಿನಿಂದ ಬೀಗ ಹಾಕಿದ ಬಳಿಕ ಉಗ್ರರು ಅಧಿಕಾರಿಗಳ ನಿವಾಸಗಳತ್ತ ಸಾಗುತ್ತಿದ್ದರು. ಆದರೆ ಅಲ್ಲಿ ಹೆಚ್ಚಿನ ಹಾನಿ ಉಂಟು ಮಾಡುವ ಮುನ್ನವೇ ಅವರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.  ದಾಳಿ ನಡೆಸಿದ ಉಗ್ರರು ಜೈಷ್‌–ಎ–ಮೊಹಮ್ಮದ್‌ ಸಂಘಟನೆಗೆ ಸೇರಿದವರು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆದರೆ ಈ ಉಗ್ರರ ಕಾರ್ಯಾಚರಣೆ ರೀತಿ ಲಷ್ಕರ್‌–ಎ–ತಯಬಾ ಉಗ್ರರ ರೀತಿಯಲ್ಲಿದೆ. ಹಾಗಾಗಿ ಇವರು ಲಷ್ಕರ್‌ ಉಗ್ರಗಾಮಿ ಸಂಘಟನೆಗೆ  ಸಂಭವವೇ ಹೆಚ್ಚು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.