ADVERTISEMENT

ತಮಿಳುನಾಡು ಮಾದರಿ ರಾಹುಲ್‌ ತಾರೀಫು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2014, 20:00 IST
Last Updated 21 ಏಪ್ರಿಲ್ 2014, 20:00 IST

ರಾಮನಾಥಪುರ (ತಮಿಳುನಾಡು), (ಪಿಟಿಐ): ‘ಗುಜರಾತ್‌ ಅಭಿವೃದ್ಧಿ ಮಾದರಿ ಬಗ್ಗೆ ಮಾತ­ನಾಡು­ವವರು ತಮಿಳು­ನಾಡಿಗೆ ಬಂದು ನೋಡಲಿ. ಇಲ್ಲಿನ ಜನ ಯಾರಿಗೂ ಕಮ್ಮಿ ಇಲ್ಲ. ತಾವೇನು ಎನ್ನುವುದನ್ನು ಇಡೀ ಜಗತ್ತಿಗೇ ತೋರಿಸಿ­ದ್ದಾರೆ’ ಎನ್ನುವ ಮೂಲಕ ಸದಾ ಗುಜರಾತ್‌ ಮಾದರಿ ಬಗ್ಗೆ ಮಾತನಾಡುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೆಣಕಿದ್ದಾರೆ.

ಪಕ್ಷದ ಅಭ್ಯರ್ಥಿ ಎಸ್‌.ತಿರುನಾವುಕ್ಕರಸರ್‌ ಪರ ಸೋಮವಾರ ಇಲ್ಲಿ ಪ್ರಚಾರ ಮಾಡಿದ ರಾಹುಲ್‌,  ತಮಿಳುನಾಡಿನ ಅಭಿವೃದ್ಧಿಯನ್ನು ಹಾಡಿ ಹೊಗಳಿದರು.

‘ಮೋದಿ ಇಲ್ಲಿಗೆ ಬಂದು ತಮಿಳುನಾಡು ಅಭಿವೃದ್ಧಿ ನೋಡಲಿ’ ಎಂದು ಸವಾಲು ಹಾಕಿದರು.

ಹೆಚ್ಚಿನ ಸ್ಥಾನ ಗೆಲ್ಲುವ ಭರವಸೆ:  ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಈ ಸಲ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂಬ ಆತ್ಮವಿಶ್ವಾಸವೂ ರಾಹುಲ್‌ ಮಾತಿನಲ್ಲಿತ್ತು.

‘ಲೋಕಸಭೆ ಚುನಾವಣೆ ಮಾತ್ರ ನಮ್ಮ ಗುರಿಯಲ್ಲ,  ಮುಂದೆ ಈ ರಾಜ್ಯದ ಚುಕ್ಕಾಣಿ ಹಿಡಿಯುವ ಹಂಬಲ ಕಾಂಗ್ರೆಸ್‌ ಪಕ್ಷಕ್ಕಿದೆ’ ಎಂದು ಹೇಳುವ ಮೂಲಕ ಅವರು, ತಮಿಳುನಾಡಿನಲ್ಲಿ ಕಾಂಗ್ರೆಸ್‌ ಬೇರುಗಳನ್ನು ಮತ್ತೆ ಗಟ್ಟಿಗೊಳಿ­ಸುವ ಸೂಚನೆ ನೀಡಿದರು.

ಹಿಂದಿನಂತೆ ಕಾಂಗ್ರೆಸ್‌ ಪಕ್ಷವು  ಈ ಬಾರಿ ತಮಿಳುನಾಡಿನಲ್ಲಿ ಪ್ರಮುಖ ದ್ರಾವಿಡ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿಲ್ಲ. ರಾಜ್ಯದ ಎಲ್ಲ 39 ಲೋಕಸಭಾ ಸ್ಥಾನಗಳಿಗೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ.

ಕಾಂಗ್ರೆಸ್‌ನ ದೀರ್ಘಕಾಲದ ಮಿತ್ರ ಡಿಎಂಕೆ,  ಲಂಕಾ ತಮಿಳರ ವಿಷಯವಾಗಿ 2013ರ ಮಾರ್ಚ್‌ನಲ್ಲಿ ಯುಪಿಎ ಸಖ್ಯ ಕಡಿದು­ಕೊಂಡಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.