ADVERTISEMENT

ತಾರಕಕ್ಕೇರಿದ ಬಿಜೆಪಿ–ಕಾಂಗ್ರೆಸ್‌ ಭಿತ್ತಿಪತ್ರ ಸಮರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 19:30 IST
Last Updated 4 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ವಡೋದ­ರಾ­ದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜಾಹೀರಾತು ಹರಿದು ಹಾಕಿದ್ದ   ಕಾಂಗ್ರೆಸ್‌ ಅಭ್ಯರ್ಥಿ ಮಧುಸೂದನ್‌ ಮಿಸ್ತ್ರಿ ವಿವಾದ ತೀವ್ರ ಸ್ವರೂಪ ಪಡೆಯುತ್ತಿದೆ.

‘ಗುಜರಾತ್‌ ಮುಖ್ಯಮಂತ್ರಿ ಮೋದಿ ಅಧಿಕಾರ  ದುರುಪಯೋಗ ಪಡಿಸಿ­ಕೊಂಡು ವಡೋದರಾದ ಜಾಹೀರಾತು ಸ್ಥಳಗಳ ಮೇಲೆ ಏಕಸ್ವಾಮ್ಯ ಸಾಧಿಸಿದ್ದಾರೆ’ ಎಂದು ಕಾಂಗ್ರೆಸ್‌ ಶುಕ್ರವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಚುನಾವಣಾ ಜಾಹೀರಾತು ಸ್ಥಳಗಳನ್ನು ಉಳಿದ ರಾಜಕೀಯ ಪಕ್ಷಗಳಿಗೆ ನೀಡಲು ಸ್ಥಳೀಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು ತಾರತಮ್ಯ ಮಾಡುತ್ತಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸರ್ಕಾರದ ಈ ನೀತಿ  ಅಡ್ಡಿಯಾಗಿದೆ ಎಂದು ಕಾಂಗ್ರೆಸ್‌ ದೂರಿನಲ್ಲಿ ತಿಳಿಸಿದೆ.

‘ಚುನಾವಣಾ ಪ್ರಚಾರಕ್ಕಾಗಿ ಮೀಸಲಿಟ್ಟಿದ್ದ ಸಾವಿರ ಆಯಕಟ್ಟಿನ ಜಾಹೀರಾತು ಸ್ಥಳಗಳನ್ನು ಬಿಜೆಪಿಗೆ ನೀಡಲಾಗಿದೆ. ಸ್ಥಳೀಯ ಅಧಿಕಾರಿಗಳು ಮೋದಿ ಇಶಾರೆಗೆ ತಕ್ಕಂತೆ ಕುಣಿಯುತ್ತಿದ್ದಾರೆ’ ಎಂದು ಎಐಸಿಸಿ ಕಾನೂನು ಘಟಕದ ಕಾರ್ಯದರ್ಶಿ ಕೆ.ಸಿ. ಮಿತ್ತಲ್‌ ಆರೋಪಿಸಿದ್ದಾರೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ಸಮಾನವಾದ ಜಾಹೀರಾತು ಸ್ಥಳ ಪಡೆಯಬೇಕು. ಮಧುಸೂದನ್‌ ಮಿಸ್ತ್ರಿ ಮತ್ತು ವಡೋದರಾ ಕಾಂಗ್ರೆಸ್ ಅಧ್ಯಕ್ಷ ನರೇಂದ್ರ ರಾವತ್‌ ಕೂಡ ಇದೇ ಆಕ್ಷೇಪ ವ್ಯಕ್ತಪಡಿಸಿದ್ದರು. ಅರ್ಧದಷ್ಟು ಜಾಹೀರಾತು ಸ್ಥಳ ಕಾಂಗ್ರೆಸ್‌ಗೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಆದರೆ ಜಿಲ್ಲಾಧಿಕಾರಿ ಸ್ಥಳೀಯ ಮುನ್ಸಿಪಲ್‌ ಆಯುಕ್ತರನ್ನು ಸಂಪರ್ಕಿ­ಸುವಂತೆ ಸೂಚಿಸಿ ಜಾರಿ­ಕೊಂಡರು. ಮುನ್ಸಿಪಲ್‌ ಆಯು­ಕ್ತರು ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿಯನ್ನು ಭೇಟಿಯಾಗುವಂತೆ  ಹೇಳಿದರು. ಇಲ್ಲಿಯವರೆಗೂ ಯಾವ ಅಧಿಕಾರಿ­ಯಿಂದಲೂ  ಉತ್ತರ ಬಂದಿಲ್ಲ ಎಂದು ಮಿತ್ತಲ್‌ ಆರೋಪಿಸಿದ್ದಾರೆ.

ಮೋದಿ ಪೋಸ್ಟರ್‌ ಕಿತ್ತ ಆರೋಪದ ಮೇಲೆ ಕಾಂಗ್ರೆಸ್‌ ಪ್ರಧಾನ ಕಾರ್ಯ­ದರ್ಶಿ ಮಿಸ್ತ್ರಿ ಮತ್ತು ಇತರ 33 ಬೆಂಬಲಿ­ಗರನ್ನು ವಶಕ್ಕೆ ಪಡೆದು ನಂತರ ತಲಾ ಐದು ಸಾವಿರ ರೂಪಾಯಿ ಭದ್ರತಾ ಠೇವಣಿ ಮೇಲೆ ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.