ADVERTISEMENT

‘ತಾರತಮ್ಯವಿಲ್ಲದೆ ಸಮಾಜದ ಸರ್ವರ ಅಭಿವೃದ್ಧಿ’ ಮಂತ್ರ

ಬಡವರ ಉದ್ಧಾರಕ್ಕೆ ಬದ್ಧ: ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಘೋಷಣೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 19:30 IST
Last Updated 19 ಮಾರ್ಚ್ 2017, 19:30 IST
ಪ್ರಮಾಣ ವಚನ ಸಮಾರಂಭಕ್ಕೆ ಬಂದ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಅವರ ಜತೆ ಪ್ರಧಾನಿ ಮೋದಿ ಅವರು ಮಾತನಾಡಿದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಇದ್ದಾರೆ –ಪಿಟಿಐ ಚಿತ್ರ
ಪ್ರಮಾಣ ವಚನ ಸಮಾರಂಭಕ್ಕೆ ಬಂದ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಹಾಗೂ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಅವರ ಜತೆ ಪ್ರಧಾನಿ ಮೋದಿ ಅವರು ಮಾತನಾಡಿದರು. ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಇದ್ದಾರೆ –ಪಿಟಿಐ ಚಿತ್ರ   
ಲಖನೌ: ‘ಯಾವುದೇ ರೀತಿಯ ತಾರತಮ್ಯವಿಲ್ಲದೆ ಸಮಾಜದ ಎಲ್ಲಾ ಸಮುದಾಯಗಳ ಏಳಿಗೆಗಾಗಿ ನಮ್ಮ ಸರ್ಕಾರ ದುಡಿಯಲಿದೆ’ ಎಂದು ಯೋಗಿ ಆದಿತ್ಯನಾಥ ಹೇಳಿದರು.
 
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಏಕಾತ್ಮ ಮಾನವತಾವಾದ ಎಂಬ ತತ್ವದ ಆಧಾರದ ಮೇಲೆ ನಮ್ಮ ಸರ್ಕಾರ ಕೆಲಸ ಮಾಡಲಿದೆ’ ಎಂದು ಹೇಳಿದರು. ಮಾಧ್ಯಮಗೋಷ್ಠಿಗೂ ಮುನ್ನ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ಸಭೆ ನಡೆಸಿದ್ದರು.
 
‘ಈ ಹಿಂದಿನ ಸರ್ಕಾರಗಳ ದುರಾಡಳಿತ ಕಾರಣ ರಾಜ್ಯ, ಅಭಿವೃದ್ಧಿಯ ಹಾದಿಯಲ್ಲಿ 15 ವರ್ಷ ಹಿಂದೆ ಉಳಿದಿದೆ. ಜನರ ಕಲ್ಯಾಣಕ್ಕಾಗಿ, ಅದರಲ್ಲೂ ಮುಖ್ಯವಾಗಿ ಬಡವರು ಮತ್ತು ದಲಿತರ ಉದ್ಧಾರ ಹಾಗೂ ಮಹಿಳೆಯರ ರಕ್ಷಣೆಗೆ ಬದ್ಧವಾಗಿದೆ’ ಎಂದು ಹೇಳಿದರು.
 
‘ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ಭ್ರಷ್ಟಾಚಾರ ಮುಕ್ತವಾಗಿಸುತ್ತೇವೆ ಮತ್ತು ಪಾರದರ್ಶಕವಾಗಿಸುತ್ತೇವೆ. ಕೌಶಲ ಅಭಿವೃದ್ಧಿ ಮೂಲಕ ಉದ್ಯೋಗವಕಾಶಗಳನ್ನು ಹೆಚ್ಚಿಸುತ್ತೇವೆ. ಹಿಂದುಳಿದ ಪ್ರಾಂತಗಳಾದ ಪೂರ್ವಾಂಚಲ ಮತ್ತು ಬುಂದೇಲ್‌ಖಂಡ ಅಭಿವೃದ್ಧಿಗಾಗಿ ವಿಕಾಸ ಮಂಡಳಿಗಳನ್ನು ಸ್ಥಾಪಿಸುತ್ತೇವೆ’ ಎಂದು ಅವರು ಘೋಷಿಸಿದ್ದಾರೆ.
 
ಆಸ್ತಿ ವಿವರ ಸಲ್ಲಿಸಿ: ‘ಎಲ್ಲಾ ಸಚಿವರು ತಮ್ಮ ಸ್ಥಿರ ಮತ್ತು ಚರ ಆಸ್ತಿಯ ಸಂಪೂರ್ಣ ವಿವರಗಳನ್ನು ಮುಂದಿನ 15 ದಿನಗಳ ಒಳಗೆ ಪಕ್ಷಕ್ಕೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಬೇಕು’ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
 
ಇದೇ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪಕ್ಷದ ಸದಸ್ಯರಿಗೆ ವಿಧಾನಸಭೆಯ ಕಾರ್ಯಕಲಾಪಗಳ ಬಗ್ಗೆ ತರಬೇತಿ ನೀಡಲು ಹಿರಿಯ ನಾಯಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.
 
ಸಂಪುಟದಲ್ಲಿ ಇಬ್ಬರು ಕ್ರಿಕೆಟಿಗರು: ಉತ್ತರ ಪ್ರದೇಶ ಸಂಪುಟದಲ್ಲಿ ಇಬ್ಬರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ ಚೇತನ್‌ ಚೌಹಾಣ್‌ ಮತ್ತು ರಣಜಿ ಆಟಗಾರ ಮೊಹ್ಸಿನ್‌ ರಜಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 
 
ಭಾರತದ ಪರ 40 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಚೌಹಾಣ್‌ 2084 ರನ್‌ ಗಳಿಸಿದ್ದಾರೆ. ನೌಗವಾನ್‌ ಸಾದಾತ್‌ ಕ್ಷೇತ್ರದಿಂದ ಗೆದ್ದಿರುವ ಅವರು ಸಂಪುಟ ದರ್ಜೆ ಸಚಿವರಾಗಿದ್ದಾರೆ. 
 
ಮಧ್ಯಮ ವೇಗದ ಬೌಲರ್‌ ರಜಾ ರಣಜಿ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ್ದಾರೆ. ಕೆಲವೇ ತಿಂಗಳ ಹಿಂದೆ ಅವರು ಬಿಜೆಪಿ ಸೇರಿದ್ದಾರೆ. 
**
‘ಸಮಾಜವಾದಿ’ಗಳ ಜೊತೆ ಕುಶಲೋಪರಿ
ಯೋಗಿ ಆದಿತ್ಯನಾಥ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಜೊತೆ ಶುಭಾಶಯ ವಿನಿಮಯ ಮಾಡಿಕೊಂಡರು.

ಅಖಿಲೇಶ್‌ ಅವರಿಗೆ ಹಸ್ತಲಾಘವ ನೀಡಿದ ಮೋದಿ, ನಂತರ ಅವರ ಬೆನ್ನು ತಟ್ಟಿದರು. ಮುಲಾಯಂ ಅವರು ಮೋದಿ ಅವರ ಕಿವಿಯಲ್ಲಿ ಏನೋ ಹೇಳಿದರು. ಮುಲಾಯಂ ಮಾತನ್ನು ಮೋದಿ ಅವರು ಗಮನವಿಟ್ಟು ಕೇಳಿದ್ದು ಕಂಡುಬಂತು.
**
ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ ಹೇಳಿಕೆಗಳನ್ನು ನೀಡಬೇಡಿ ಎಂದು ನಮ್ಮ ಸಂಪುಟ ಸದಸ್ಯರಿಗೆ ತಿಳಿಸಿದ್ದೇನೆ
ಯೋಗಿ ಆದಿತ್ಯನಾಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.