ADVERTISEMENT

ತುರ್ತು ಸಭೆ ಕರೆಯಲು ಅಕಾಡೆಮಿ ಚಿಂತನೆ

ಕಲಬುರ್ಗಿ ಹತ್ಯೆಗೆ ಖಂಡನೆ: ಮುಂದುವರಿದ ರಾಜೀನಾಮೆ ಸರಣಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2015, 20:05 IST
Last Updated 11 ಅಕ್ಟೋಬರ್ 2015, 20:05 IST

ನವದೆಹಲಿ: ವಿಚಾರವಾದಿ ಎಂ.ಎಂ.ಕಲಬುರ್ಗಿ ಅವರ ಹತ್ಯೆ ಖಂಡಿಸಿ ಸಾಹಿತ್ಯ ಅಕಾಡೆಮಿ ಸದಸ್ಯರು ರಾಜೀನಾಮೆ ಕೊಡುತ್ತಿರುವುದು ಹಾಗೂ ಖ್ಯಾತ ಬರಹಗಾರರು ಅಕಾಡೆಮಿ ಪ್ರಶಸ್ತಿ ವಾಪಸ್‌ ಮಾಡುತ್ತಿರುವುದು ಮುಂದುವರಿದಿರುವ ಕಾರಣ ಅಕಾಡೆಮಿಯು ತನ್ನ ಕಾರ್ಯಕಾರಿ ಮಂಡಳಿಯ ಸಭೆ ಕರೆಯಲು ಚಿಂತನೆ ನಡೆಸಿದೆ.

‘ತುರ್ತು ಸನ್ನಿವೇಶ ಉಂಟಾಗಿರುವ ಕಾರಣ ನಾವು ತುರ್ತು ಸಭೆ ಕರೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇವೆ. ಈವರೆಗೆ ಈ ಸಂಬಂಧ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಸಭೆ ಹಮ್ಮಿಕೊಳ್ಳುವುದಕ್ಕೆ ಅಕಾಡೆಮಿಯು ಹೆಚ್ಚುವರಿಯಾಗಿ ₹ 10ರಿಂದ15 ಲಕ್ಷ ಖರ್ಚು ಮಾಡಬೇಕಾಗುತ್ತದೆ. ಯಾಕೆಂದರೆ ಡಿಸೆಂಬರ್‌ನಲ್ಲಿ ನಿಗದಿಯಾಗಿರುವ ಕಾರ್ಯಕಾರಿ ಮಂಡಳಿಯ ಸಭೆಯನ್ನೂ  ನಡೆಸಬೇಕಾಗುತ್ತದೆ’ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್‌ ಪ್ರಸಾದ್‌ ತಿವಾರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಪ್ಪು ನಡೆ; ತಿವಾರಿ: ಬರಹಗಾರರು ಪ್ರಶಸ್ತಿಯನ್ನು ವಾಪಸ್‌ ಮಾಡುತ್ತಿರುವುದಕ್ಕೆ ತಿವಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇದು ತಪ್ಪು ನಡೆ’ ಎಂದು ಕರೆದಿದ್ದಾರೆ.

‘ಯಾವುದೇ ಬರಹಗಾರನನ್ನು ಆತನ ಅನಿಸಿಕೆಗಾಗಿ ಹತ್ಯೆ ಮಾಡಿದರೆ ಅಕಾಡೆಮಿಯು ಅದನ್ನು ಖಂಡಿಸುತ್ತದೆ.  ನಾವು ಇನ್ನೇನು ಮಾಡಲು ಸಾಧ್ಯ? ಅವರು ಯಾಕೆ ರಾಜೀನಾಮೆ ಕೊಡುತ್ತಿದ್ದಾರೆ? ಅವರು ಯಾಕೆ ಪ್ರಶಸ್ತಿಗಳನ್ನು ವಾಪಸ್‌ ಮಾಡುತ್ತಿದ್ದಾರೆ? ಖಂಡಿಸುವುದಕ್ಕೆ ಅವರು ಬೇರೆ ಯಾವುದಾದರೂ ಮಾರ್ಗ ಅನುಸರಿಸಬೇಕು. ಅಕಾಡೆಮಿ ಎಲ್ಲ ಬರಹಗಾರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ. ಆದರೆ, ಈ ನೆಪದಲ್ಲಿ ರಾಜಕೀಯ ಮಾಡಬಾರದು. ನಾನು ಬರಹಗಾರರ ಸಮಯದಾಯದಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಅವರು ಮುಂದೆ ಬಂದು ಅಕಾಡೆಮಿಯ ಘನತೆ ಕಾಪಾಡಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.