ADVERTISEMENT

ತ್ರಿವಳಿ ತಲಾಖ್‌ ಕರಡು ಮಸೂದೆಗೆ ಒಪ್ಪಿಗೆ

ಪಿಟಿಐ
Published 6 ಡಿಸೆಂಬರ್ 2017, 19:30 IST
Last Updated 6 ಡಿಸೆಂಬರ್ 2017, 19:30 IST
ತ್ರಿವಳಿ ತಲಾಖ್‌ ಕರಡು ಮಸೂದೆಗೆ ಒಪ್ಪಿಗೆ
ತ್ರಿವಳಿ ತಲಾಖ್‌ ಕರಡು ಮಸೂದೆಗೆ ಒಪ್ಪಿಗೆ   

ಲಖನೌ: ಕೇಂದ್ರ ಸರ್ಕಾರದ ತ್ರಿವಳಿ ತಲಾಖ್‌ ನಿಷೇಧ ಕರಡು ಮಸೂದೆಗೆ ಉತ್ತರ ಪ್ರದೇಶ ಸರ್ಕಾರ ಅನುಮೋದನೆ ನೀಡಿದೆ. ಆ ಮೂಲಕ ಮಸೂದೆಗೆ ಒಪ್ಪಿಗೆ ಸೂಚಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಕರಡು ಮಸೂದೆ’ಯನ್ನು ಇತ್ತೀಚೆಗೆ ಎಲ್ಲ ರಾಜ್ಯ ಸರ್ಕಾರಗಳಿಗೆ ರವಾನಿಸಿದ್ದ ಕೇಂದ್ರ, ಇದೇ 10ರೊಳಗೆ ಅಭಿಪ್ರಾಯ ತಿಳಿಸುವಂತೆ ಕೋರಿತ್ತು.

ತ್ರಿವಳಿ ತಲಾಖ್‌ ಜಾಮೀನುರಹಿತ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿರುವ ಕರಡು ಪ್ರಸ್ತಾವನೆಗೆ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ADVERTISEMENT

ಗೃಹ ಸಚಿವ ರಾಜನಾಥ ಸಿಂಗ್‌ ನೇತೃತ್ವದ ಅಂತರ ಸಚಿವಾಲಯ ತಂಡ ಸಿದ್ಧಪಡಿಸಿರುವ ಕರಡು ಪ್ರಸ್ತಾವನೆಯನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ನಿರ್ಧರಿಸಿದೆ. ತ್ರಿವಳಿ ತಲಾಖ್‌ ಅಥವಾ ತಲಾಖ್‌ –ಏ–ಬಿದ್ದತ್‌ಗೆ ಮಾತ್ರ ಈ ಮಸೂದೆ ಅನ್ವಯಿಸಲಿದೆ.

‘ಸುಪ್ರೀಂ’ತೀರ್ಪಿನ ನಂತರವೂ ಕಡಿಮೆಯಾಗದ ತಲಾಖ್‌

ಮುಸ್ಲಿಂ ಸಮುದಾಯದಲ್ಲಿ ವಿವಾಹ ವಿಚ್ಛೇದನ ನೀಡಲು ಜಾರಿಯಲ್ಲಿದ್ದ ತ್ರಿವಳಿ ತಲಾಖ್‌ ಪದ್ಧತಿ ಅಸಾಂವಿಧಾನಿಕ ಮತ್ತು ಸಂವಿಧಾನದ 14ನೇ ಕಲಂನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಇದೇ ಆಗಸ್ಟ್‌ 22ರಂದು ತೀರ್ಪು ನೀಡಿತ್ತು.

ಆದರೆ, ತೀರ್ಪಿನ ನಂತರವೂ ತ್ರಿವಳಿ ತಲಾಖ್‌ ನಿಂತಿಲ್ಲ. ತೀರ್ಪು ಹೊರಬಿದ್ದ ಆ.22ರಿಂದ ಈಚೆಗೆ 66 ಪ್ರಕರಣ ಮತ್ತು ಅದಕ್ಕೂ ಮೊದಲು 177 ಪ್ರಕರಣ ದಾಖಲಾಗಿವೆ. ಆ ಪೈಕಿ ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣ ವರದಿಯಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತ್ರಿವಳಿ ತಲಾಖ್‌ ಜಾಮೀನುರಹಿತ ಅಪರಾಧವಾಗಿದ್ದು, ತಲಾಖ್‌ ನೀಡಿದವರಿಗೆ ಮೂರು ವರ್ಷ ಶಿಕ್ಷೆ ಮತ್ತು ದಂಡ ವಿಧಿಸುವ ಪ್ರಸ್ತಾವ ಕರಡು ಮಸೂದೆಯಲ್ಲಿದೆ.

ಗಂಡನಿಂದ ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಲು ಅರ್ಹಳಾಗಿದ್ದು, ಚಿಕ್ಕ ವಯಸ್ಸಿನ ಮಕ್ಕಳ ಸು‍ಪರ್ದಿ ಹಕ್ಕನ್ನೂ ಆಕೆಗೆ ನೀಡಲಾಗಿದೆ. ಮಕ್ಕಳ ಜೀವನ ನಿರ್ವಹಣೆಗಾಗಿ ಪ್ರತ್ಯೇಕ ಜೀವನಾಂಶ ಕೋರುವ ಹಕ್ಕನ್ನೂ ಆಕೆ ಪಡೆದಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.