ADVERTISEMENT

ದತ್ತು ನೋಂದಣಿ ಕಡ್ಡಾಯಕ್ಕೆ ಚಿಂತನೆ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ನವದೆಹಲಿ: ಮಕ್ಕಳ ದತ್ತು ದುರ್ಬಳಕೆಯನ್ನು ತಡೆದು, ಹೆಚ್ಚಿನ ಪಾರದರ್ಶಕತೆ ತರಲು ದತ್ತು ಪ್ರಕ್ರಿಯೆ ನೋಂದಣಿಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

‘ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ’ (ಎಚ್‌ಎಎಂಎ) ಅಡಿ ಮಕ್ಕಳನ್ನು ದತ್ತು ಪಡೆಯುವ ಪೋಷಕರು ಇನ್ನು ಮುಂದೆ ಕಡ್ಡಾಯವಾಗಿ ‘ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರ’ದಲ್ಲಿ (ಸಿಎಆರ್‌ಎ) ನೋಂದಣಿ ಮಾಡಿಸಬೇಕಾಗುತ್ತದೆ.

ಇದಕ್ಕೆ ಪೂರಕವಾಗಿ, 60 ವರ್ಷ ಹಳೆಯದಾದ ‘ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ’ಗೆ ತಿದ್ದುಪಡಿ ತರಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸಂಪುಟ ಟಿಪ್ಪಣಿಯ ಕರಡು ಸಿದ್ಧಪಡಿಸಿದೆ.

ADVERTISEMENT

ಟಿಪ್ಪಣಿಯನ್ನು ಪ್ರಧಾನಿ ಕಚೇರಿ ಸೇರಿದಂತೆ ಎಲ್ಲ ಸಚಿವಾಲಯಗಳ ಅವಗಾಹನೆಗೆ ರವಾನಿಸಿ ಅಭಿಪ್ರಾಯ ಪಡೆದ ನಂತರ ಸಂಪುಟ ಸಭೆಯ ಎದುರು ಚರ್ಚೆಗೆ ಇಡಲಾಗುವುದು ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಹೆಚ್ಚುತ್ತಿರುವ ಮಕ್ಕಳ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ನೋಂದಣಿ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದತ್ತು ನೋಂದಣಿ ಹೇಗೆ?: ಮಕ್ಕಳ ದತ್ತು ಕರಾರು ಪತ್ರವನ್ನು ಮಕ್ಕಳ ದತ್ತು ಸಂಪನ್ಮೂಲ ಪ್ರಾಧಿಕಾರದ ವೆಬ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕಾಗುತ್ತದೆ. ದಾಖಲೆಗಳ ಸಮಗ್ರ ಪರಿಶೀಲನೆ ನಂತರ ಪ್ರಾಧಿಕಾರ ಪೋಷಕರಿಗೆ ದತ್ತು ಪ್ರಮಾಣ ಪತ್ರ ವಿತರಿಸುತ್ತದೆ ಎನ್ನುತ್ತಾರೆ ಪ್ರಾಧಿಕಾರದ ಸಿಇಒ ಲೆಫ್ಟಿನೆಂಟ್‌ ಕರ್ನಲ್‌ ದೀಪಕ್‌ ಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.