ADVERTISEMENT

ದಾಖಲೆ ಸಂಖ್ಯೆಯ ಮಸೂದೆ ಅಂಗೀಕಾರ

ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2014, 11:28 IST
Last Updated 23 ಡಿಸೆಂಬರ್ 2014, 11:28 IST

ನವದೆಹಲಿ (ಪಿಟಿಐ): ಲೋಕಸಭೆಯ ಚಳಿಗಾಲದ ಅಧಿವೇಶದ ಕಲಾಪವು ಮಂಗಳವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. 22 ದಿನಗಳ ಕಲಾಪದಲ್ಲಿ ತಿದ್ದುಪಡಿ ಕಾಯ್ದೆಗಳು ಸೇರಿದಂತೆ ದಾಖಲೆಯ 18 ಮಸೂದೆಗಳಿಗೆ ಕೆಳಮನೆಯಲ್ಲಿ ಅನುಮೋದನೆ ದೊರೆತಿದೆ.

ಸೋಮವಾರ ಮಧ್ಯಾಹ್ನದ ವಿರಾಮದ ಬಳಿಕ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರು ಪ್ರಕಟಿಸಿದರು.

ಇದಕ್ಕೂ ಮೊದಲು ಮತಾಂತರ ಘಟನೆಯ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಕೋಲಾಹಲ ಸೃಷ್ಟಿಸಿದವು. ಪರಿಣಾಮವಾಗಿ ಕಲಾಪವು ಕೆಲ ಬಾರಿ ಮುಂದೂಡಲಾಗಿತ್ತು.

ADVERTISEMENT

ಸದನದಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಲು ಎದ್ದು ನಿಲ್ಲುತ್ತಿದ್ದಂತೆಯೇ, ‘ನೀವೇನೂ ಒಳ್ಳೆಯ ಮಾತುಗಳನ್ನಾಡುವುದಿಲ್ಲ’ ಎಂದು ಟೀಕಿಸಿದ ಸ್ಪೀಕರ್‌, ‘ನಾನು ಯಾರಿಗೂ ಮಾತನಾಡಲು ಅವಕಾಶ ನೀಡುವುದಿಲ್ಲ. ಪ್ರಧಾನಿ ಅವರಿಗೂ ಮಾತನಾಡಲು ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟ ಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ‘ನಾನು ಉತ್ತಮವಾದುದ್ದನ್ನು ಹೇಳುತ್ತೇನೆ. ಪ್ರಧಾನಿ ಅವರು ಹೇಳಿಕೆ ನೀಡಬೇಕೆಂಬುದು ನನ್ನ ಆಶಯ. ಪ್ರಧಾನಿ ಅವರು ತಮ್ಮ ಮನದ ಮಾತನ್ನು ಸದನಕ್ಕೆ ಹೇಳಬೇಕು’ ಎಂದರು.

ಇದಕ್ಕೆ ಉತ್ತರಿಸಿದ ಸ್ಪೀಕರ್‌, ‘ನಾನು ಒಂದು ಬಾರಿ ಇಲ್ಲ ಎಂದ ಮೇಲೆ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

ಬಳಿಕ ಅವರು, ‘ಈ ಬಾರಿಯ ಅಧಿವೇಶನದಲ್ಲಿ 18 ಮಸೂದೆಗಳು ಅನುಮೋದನೆ ಪಡೆದಿವೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತದೆ’ ಎಂದು ಸದನವನ್ನುದ್ದೇಶಿಸಿ ಹೇಳಿದರು.

ಗದ್ದಲ ಹಾಗೂ ನಿಲುವಳಿಗಳಿಂದಾಗಿ ಮೂರು ಗಂಟೆಗಳಷ್ಟು ಸಮಯ ವ್ಯರ್ಥವಾಗಿದೆ ಎಂದು ತಿಳಿಸಿದ ಸ್ಪೀಕರ್‌, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ 22 ದಿನ ಕಲಾಪ ನಡೆದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.