ADVERTISEMENT

ದೆಹಲಿಯಲ್ಲಿ ಬಿಜೆಪಿ ಸರ್ಕಾರ ?

ಸರ್ಕಾರ ರಚನೆ ಕಸರತ್ತು: ಸುಪ್ರೀಂ ತರಾಟೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2014, 9:44 IST
Last Updated 28 ಅಕ್ಟೋಬರ್ 2014, 9:44 IST

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಕಳೆದ 5 ತಿಂಗಳಿಂದ ನಡೆಯುತ್ತಿದ್ದ  ಕಸರತ್ತು ಕೊನೆಗೊಳ್ಳುವ ಹಂತಕ್ಕೆ ಬಂದಿದ್ದು, ಏಕೈಕ ದೊಡ್ಡ ಪಕ್ಷ ಬಿಜೆಪಿ ಆಡಳಿತಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.

ಬಿಜೆಪಿಯನ್ನು ಸರಕಾರ ರಚನೆಗೆ ಆಹ್ವಾನಿಸಲು ಅನುಮತಿ ಕೋರಿ ಲೆಪ್ಟಿನೆಂಟ್‌ ಗವರ್ನರ್‌, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಬರೆದ ಪತ್ರಕ್ಕೆ ಮಂಗಳವಾರ ಸಮ್ಮತಿ ಲಭಿಸಿದೆ. ಕೇಂದ್ರ ಸರ್ಕಾರ ಕೂಡ ತನ್ನ ನಿರ್ಧಾರವನ್ನು ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಸುಪ್ರೀಂ ತರಾಟೆ
ದೆಹಲಿ ವಿಧಾನಸಭೆಯನ್ನು ಅನಿರ್ದಿಷ್ಟಾವಧಿ ಅಮಾನತಿನಲ್ಲಿ ಇರಿಸಿ ರಾಷ್ಟ್ರಪತಿ ಅವರು ಹೊರಡಿಸಿದ ಘೋಷಣೆಯನ್ನು ಎಎಪಿ ಪ್ರಶ್ನಿಸಿತ್ತು. ಮಂಗಳವಾರ ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂಕೋರ್ಟ್ ಪೀಠವು, ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

‘ಈ ವಿಳಂಬ ನೀತಿಯು, ದೆಹಲಿಯ ಜನರನ್ನು ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರ್ಕಾರವನ್ನು ಹೊಂದುವ ಅವಕಾಶದಿಂದ ವಂಚಿತರನ್ನಾಗಿ ಮಾಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ  ದೇಶದಲ್ಲಿ  ರಾಷ್ಟ್ರಪತಿ ಆಡಳಿತವನ್ನು ಅನಿರ್ದಿಷ್ಟಾವಧಿಗೆ ಮುಂದು­ವರಿಸಿಕೊಂಡು ಹೋಗುವುದು ಸರಿಯಲ್ಲ. ಆದಷ್ಟು ಬೇಗನೇ ಸರ್ಕಾರ ರಚನೆಗೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೀಠ ತಾಕೀತು ಮಾಡಿತು.

ದೆಹಲಿಯಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಈಗಾಗಲೇ 5 ತಿಂಗಳು ಸಮಯಾವಾಕಾಶ ನೀಡಲಾಗಿದೆ. ಆದರೆ, ಇದುವರೆಗೆ ಕೇಂದ್ರ ಸರ್ಕಾರವಾಗಲಿ, ಲೆಫ್ಟಿನೆಂಟ್‌ ಗವರ್ನರ್‌ ಆಗಲಿ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರವನ್ನು ಹೊಂದುವುದು ದೆಹಲಿ ಜನರ ಹಕ್ಕು ಎಂದು ಕೋರ್ಟ್‌ ಎಚ್ಚರಿಕೆ ನೀಡಿತು.

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 32, ಎಎಪಿಯ 28 ಶಾಸಕರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT