ADVERTISEMENT

ದೆಹಲಿಯಲ್ಲಿ 47.8 ಡಿಗ್ರಿ ಉಷ್ಣಾಂಶ

62 ವರ್ಷಗಳ ನಂತರ ದಾಖಲೆ ಮಟ್ಟದಲ್ಲಿ ಏರಿಕೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2014, 19:30 IST
Last Updated 8 ಜೂನ್ 2014, 19:30 IST

ನವದೆಹಲಿ (ಪಿಟಿಐ): ರಾಜ­ಧಾನಿಯಲ್ಲಿ ಭಾನುವಾರ ಉಷ್ಣಾಂಶ ತೀವ್ರಮಟ್ಟಕ್ಕೆ ಏರಿಕೆ­ಯಾಗಿದ್ದು, 45.1 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.  ಪಾಲಂ ವಿಮಾನ ನಿಲ್ದಾಣದಲ್ಲಿ 47.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖ­ಲಾಗಿದ್ದು, ಇದು 62 ವರ್ಷಗಳಲ್ಲೇ ಗರಿಷ್ಠ ಮಟ್ಟದ್ದಾಗಿದೆ.

ಬಿಸಿಲಿನ ಝಳದಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆ­ದಂತೆ ಭಾನುವಾರ ಪದೇ ಪದೇ ವಿದ್ಯುತ್‌ ವ್ಯತ್ಯಯವಾಗಿ ಜನರು ಸೆಕೆ­ಯಿಂದ ಪರಿತಪಿಸಿದರು. ಸೋಮವಾರ (ಜೂನ್‌ 9) ಕೂಡ ಉಷ್ಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

‘ನಗರದಲ್ಲಿ ಕಳೆದ ಐದು ವರ್ಷ­ಗಳಲ್ಲಿ ಭಾನುವಾರದ ಉಷ್ಣಾಂಶ ಅತ್ಯಧಿಕವಾಗಿತ್ತು. ಶನಿವಾರ ಕೂಡ 44.9 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖ­ಲಾಗಿತ್ತು. ಪಾಲಂ ವಿಮಾನ ನಿಲ್ದಾಣದ ಪ್ರದೇಶದಲ್ಲಿ ಸೆಕೆಯ ಪ್ರಕೋಪ ಇನ್ನೂ ತೀವ್ರವಾಗಿತ್ತು. 1952ರ ನಂತರ ಇಲ್ಲಿ ಉಷ್ಣಾಂಶದ ಪ್ರಮಾಣ 47.8 ಡಿಗ್ರಿ ಸೆಲ್ಸಿಯಸ್‌ಗೆ ಮಟ್ಟಕ್ಕೆ ಏರಿಕೆ ಆಗಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ.

ಮಾಲ್‌ಗಳಿಗೆ ವಿದ್ಯುತ್ ಕಡಿತ
ದೆಹಲಿಯಲ್ಲಿ ರಾತ್ರಿ 10ರ ನಂತರ ಶಾಪಿಂಗ್ ಮಾಲ್‌­ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸ ಲಾಗುವುದು ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್‌ ಜಂಗ್ ಭಾನುವಾರ ತಿಳಿಸಿದ್ದಾರೆ.

ವಿದ್ಯುತ್ ಪೂರೈಕೆ ಕುರಿತು ದೆಹಲಿ­ಯಲ್ಲಿ ನಡೆದ ಪರಿಶೀಲನಾ ಸಭೆ­ಯಲ್ಲಿ ಭಾಗವಹಿಸಿದ್ದ ಜಂಗ್ ಅವರು  ವಿದ್ಯುತ್‌ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಈ ಹೇಳಿಕೆ ನೀಡಿದ್ದಾರೆ. ವಿದ್ಯುತ್ ವ್ಯತ್ಯಯ ಉಂಟಾಗುವ ಬಗ್ಗೆ ಸಂಬಂಧಿಸಿದ ಪ್ರದೇಶಗಳ ಜನರಿಗೆ ಮುಂಚಿತವಾಗಿಯೇ ಮಾಹಿತಿ ನೀಡು­ವಂತೆ ಸಂಬಂಧಿಸಿದ ಅಧಿಕಾರಿಗಳಿಗೂ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.