ADVERTISEMENT

ದೆಹಲಿ ಚುನಾವಣೆಗೆ ಸಿದ್ಧ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

ನವದೆಹಲಿ (ಪಿಟಿಐ): ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ  ಪಕ್ಷದ ಗೆಲುವಿನ  ಹುಮ್ಮಸ್ಸಿನಲ್ಲಿರುವ ಬಿಜೆಪಿ, ದೆಹಲಿಯಲ್ಲಿ ಹೊಸದಾಗಿ ಚುನಾವಣೆ ಎದುರಿಸಲು ಸಿದ್ಧ ಎಂದು ಭಾನುವಾರ ಹೇಳಿದೆ. ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದಲ್ಲಿ ಬಿಜೆಪಿ ಅದನ್ನು ತಳ್ಳಿಹಾಕುವ ಸಾಧ್ಯತೆ ಇದೆ.

ಬಿಜೆಪಿಗೆ ಜನ ಬೆಂಬಲ ಕಮ್ಮಿ ಆಗಿಲ್ಲ ಎನ್ನುವುದನ್ನು  ಮಹಾರಾಷ್ಟ್ರ ಹಾಗೂ ಹರಿಯಾಣ ವಿಧಾನಸಭೆ ಚುನಾವಣೆಗಳು ‘ಸಾಬೀತು’ ಮಾಡಿವೆ.  ದೆಹಲಿಯಲ್ಲಿ ಮತ್ತೆ ಚುನಾವಣೆ ಆದರೆ ಪಕ್ಷಕ್ಕೆ ಸ್ಪಷ್ಟ ಜನಾದೇಶ ಸಿಗುತ್ತದೆ ಎಂದು ದೆಹಲಿ ಬಿಜೆಪಿ ಕಾರ್ಯದರ್ಶಿ, ದಕ್ಷಿಣ ದೆಹಲಿ ಸಂಸದ ರಮೇಶ್‌ ಬಿಧುರಿ ಹೇಳಿದ್ದಾರೆ.

ಬಿಜೆಪಿಗೆ ಸವಾಲು: ರಾಜಧಾನಿಯಲ್ಲಿ ಮೋದಿ ಅಲೆ ಕೆಲಸ ಮಾಡುತ್ತದೆಂಬ ವಿಶ್ವಾಸ ಇದ್ದಲ್ಲಿ ಬಿಜೆಪಿ ಯಾಕೆ ದೆಹಲಿ­ಯಲ್ಲಿ ಮತ್ತೆ ಚುನಾವಣೆ ನಡೆಸ­ಬಾರದು  ಎಂದು ಕಾಂಗ್ರೆಸ್‌ ಸವಾಲು ಹಾಕಿದೆ.

‘ಮಹಾರಾಷ್ಟ್ರ, ಹರಿಯಾಣದಲ್ಲಿನ ಸೋಲು ದೆಹಲಿಯಲ್ಲಿ ಪಕ್ಷದ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಂದಿಸಿಲ್ಲ. ನಾವು ಮತ್ತೆ ಚುನಾವಣೆ ಎದುರಿಸಲು ಸಿದ್ಧ. ಕೂಡಲೇ ದೆಹಲಿ ವಿಧಾನಸಭೆ ವಿಸರ್ಜಿಸಬೇಕು’ ಎಂದು ದೆಹಲಿ ಕಾಂಗ್ರೆಸ್‌ ಮುಖ್ಯ ವಕ್ತಾರ ಮುಕೇಶ್‌ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.