ADVERTISEMENT

ದೆಹಲಿ, ಚೆನ್ನೈ, ಬೆಂಗಳೂರಲ್ಲಿ ಹೆಚ್ಚು ರಸ್ತೆ ಅಪಘಾತ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ದೆಹಲಿ, ಚೆನ್ನೈ, ಬೆಂಗಳೂರಲ್ಲಿ ಹೆಚ್ಚು ರಸ್ತೆ ಅಪಘಾತ
ದೆಹಲಿ, ಚೆನ್ನೈ, ಬೆಂಗಳೂರಲ್ಲಿ ಹೆಚ್ಚು ರಸ್ತೆ ಅಪಘಾತ   

ನವದೆಹಲಿ: ದೇಶದ ಪ್ರಮುಖ ನಗರಗಳಾದ ದೆಹಲಿ, ಚೆನ್ನೈ ಮತ್ತು ಬೆಂಗಳೂರಿನ ರಸ್ತೆಗಳು ಅಪಘಾತಕ್ಕೆ ಸಂಬಂಧಿಸಿದಂತೆ ಅತ್ಯಂತ ಅಪಾಯಕಾರಿಯಾಗಿವೆ. 2015ರಲ್ಲಿ ಈ ಮೂರು ನಗರಗಳಲ್ಲಿ ನಡೆದ ಅಪಘಾತಗಳಲ್ಲಿ ಅತಿ ಹೆಚ್ಚಿನ ಸಾವು ಸಂಭವಿಸಿವೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಾರಿಗೆ ಸಂಶೋಧನಾ ಘಟಕ ಸಿದ್ಧಪಡಿಸಿದ ‘2015ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳು’ ವರದಿಯ ಪ್ರಕಾರ, ರಸ್ತೆ ಅಪಘಾತಗಳಲ್ಲಿ ದೆಹಲಿಯಲ್ಲಿ 1,622, ಚೆನ್ನೈಯಲ್ಲಿ 886 ಮತ್ತು ಬೆಂಗಳೂರಿನಲ್ಲಿ 713 ಜನರು ಮೃತಪಟ್ಟಿದ್ದಾರೆ.

ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳ ಬಗ್ಗೆ ಘಟಕವು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ದೆಹಲಿಯಲ್ಲಿ ಕಳೆದ ವರ್ಷ ಒಟ್ಟು 8,085 ಅಪಘಾತಗಳು ನಡೆದಿದ್ದು 8,258 ಮಂದಿ ಗಾಯಗೊಂಡಿದ್ದಾರೆ.

ಚೆನ್ನೈಯಲ್ಲಿ 7,328 ಅಪಘಾತಗಳಾಗಿ 7,320 ಜನರು ಮತ್ತು ಬೆಂಗಳೂರಿನಲ್ಲಿ 4,834 ರಸ್ತೆ ಅವಘಡಗಳಲ್ಲಿ 4,057 ಜನರು ಗಾಯಗೊಂಡಿದ್ದಾರೆ. ಮುಂಬೈಯಲ್ಲಿ ಅತಿ ಹೆಚ್ಚು ಅಪಘಾತಗಳು (23,468) ನಡೆದಿದ್ದರೂ ಮೃತಪಟ್ಟವರ ಸಂಖ್ಯೆ 611 ಮತ್ತು ಗಾಯಗೊಂಡವರು 4,029 ಮಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.