ADVERTISEMENT

ದೇವಯಾನಿಗೆ ಮತ್ತೆ ಕಂಟಕ

ಮನೆ ಪಡೆಯಲು ಸುಳ್ಳು ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2014, 19:30 IST
Last Updated 5 ಏಪ್ರಿಲ್ 2014, 19:30 IST

ನವದೆಹಲಿ (ಪಿಟಿಐ): ಮನೆಗೆಲಸದ ಸಹಾಯಕಿಗೆ  ವೀಸಾ ಪಡೆಯಲು ಸುಳ್ಳು ಮಾಹಿತಿ ನೀಡಿ ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿದ್ದ ವಿವಾದಿತ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೊಬ್ರಾಗಡೆ ಇದೀಗ ತಾಯ್ನಾಡಿನಲ್ಲಿಯೇ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಮುಂಬೈನ ಆದರ್ಶ ವಸತಿ ಸಮು­ಚ್ಚಯ­ದಲ್ಲಿ ಮನೆ (ಫ್ಲ್ಯಾಟ್‌) ಪಡೆ­ಯಲು ದೇವಯಾನಿ ಮತ್ತು ಅವರ ತಂದೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ­ದ್ದಾರೆ ಎಂಬ ಆರೋಪವಿದೆ.

ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರ ಹಾಗೂ ದಾಖಲೆ ಸಂಗ್ರಹಿಸಿದೆ ಎನ್ನಲಾದ ಸಿಬಿಐ, ತಂದೆ ಮತ್ತು ಮಗಳ ವಿರುದ್ಧ   ನ್ಯಾಯಾ­ಲಯ­ಕ್ಕೆ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.  ಮನೆ ಖರೀದಿ ವೇಳೆ  ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸರ್ಕಾರಿ ಕೋಟಾದ ಅಡಿ ರಿಯಾಯ್ತಿ ದರದಲ್ಲಿ ಈ ಮೊದಲೇ ಪಡೆ­ದಿದ್ದ ಮನೆ ಮತ್ತು ಭೂಮಿಯ ಬಗ್ಗೆ ಮಾಹಿತಿ
ನೀಡದೆ ಮುಚ್ಚಿಟ್ಟಿರುವುದು ಇಬ್ಬರಿಗೆ  ಉರುಳಾಗುವ ಸಾಧ್ಯತೆ ಇದೆ.

ಮಹಾರಾಷ್ಟ್ರ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದ ಉತ್ತಮ್‌ ಖೋಬ್ರಾಗಡೆ ಮಹಾರಾಷ್ಟ್ರ ವಸತಿ ಮತ್ತು ಪ್ರದೇ­ಶಾ­ಭಿ­ವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಹಣಾ ಅಧಿಕಾರಿ­ಯಾಗಿ ಸೇವೆ ಸಲ್ಲಿಸಿದ್ದರು.

ಮನೆಗೆಲಸದ ಸಹಾಯಕಿಯ ವೀಸಾ ಪಡೆಯಲು ಸುಳ್ಳು ಮಾಹಿತಿ ನೀಡಿದ್ದ ಆರೋಪದ ಮೇಲೆ ರಾಜತಾಂತ್ರಿಕ ಅಧಿ­ಕಾರಿ ದೇವಯಾನಿ ಅವರನ್ನು ಅಮೆರಿಕ ಪೊಲೀಸರು ನಡು­­ರಸ್ತೆಯಲ್ಲಿ ಕೈಕೋಳ ತೊಡಿಸಿ ಬಂಧಿಸಿ ಕರೆದೊಯ್ದಿದ್ದರು.

ಈ ಘಟನೆ ಅಮೆರಿಕ ಮತ್ತು ಭಾರತದ ರಾಜತಾಂತ್ರಿಕ ಸಂಬಂಧ­ಗಳಲ್ಲಿ ಬಿಕ್ಕಟ್ಟು ಸೃಷ್ಟಿಗೆ ಕಾರಣ­ವಾಗಿತ್ತು. ದೇವ­ಯಾನಿ ಬಂಧನ ತಪ್ಪಿಸಲು ಅವರನ್ನು  ವಾಪಾಸ್‌ ಕರೆಸಿ­ಕೊಂಡ ಸರ್ಕಾರ ಇಲ್ಲಿಯೇ  ಕರ್ತವ್ಯಕ್ಕೆ ನಿಯೋಜಿಸಿದೆ.

ಆದರ್ಶ ಹಗರಣ ಅವ್ಯವಹಾರಗಳ ತನಿಖೆ ನಡೆಸಿದ್ದ ಮುಂಬೈ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜೆ.ಎ. ಪಾಟೀಲ್ ಸಮಿತಿ 102 ಜನರ ಪೈಕಿ 25 ಅನರ್ಹ ಫಲಾನುಭವಿಗಳನ್ನು ಪತ್ತೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.