ADVERTISEMENT

ನಖ್ವಿ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ಗೋಮಾಂಸ ಭಕ್ಷಕರು ಪಾಕಿಸ್ತಾನಕ್ಕೆ ಹೋಗಲಿ

​ಪ್ರಜಾವಾಣಿ ವಾರ್ತೆ
Published 23 ಮೇ 2015, 11:40 IST
Last Updated 23 ಮೇ 2015, 11:40 IST

ಶ್ರೀನಗರ (ಪಿಟಿಐ): ಗೋಮಾಂಸ ತಿನ್ನಬೇಕೆಂದವರು ಪಾಕಿಸ್ತಾನಕ್ಕೆ ಹೋಗಲಿ ಎಂಬ ಸಚಿವ ಮುಖ್ತರ್‌ ಅಬ್ಬಾಸ್‌ ನಖ್ವಿ ಹೇಳಿಕೆಗೆ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ.

‘ಇದು ಬಿಜೆಪಿ ನಾಯಕರ ಮನಸ್ಥಿತಿ ಬಿಂಬಿಸುತ್ತದೆ’ ಎಂದು  ಕಾಂಗ್ರೆಸ್‌ ನಾಯಕ ಮೀಮ್‌ ಅಫ್ಜಲ್‌ ಶನಿವಾರ ತಿರುಗೇಟು ನೀಡಿದ್ದಾರೆ.

‘ಈ ಮೊದಲು ನರೇಂದ್ರ ಮೋದಿ ಅವರಿಗೆ ಮತ ಹಾಕದವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಗಿರಿರಾಜ್‌ ಕಿಶೋರ್‌ ಹೇಳಿಕೆ ನೀಡಿದ್ದರು.
ಆದರೆ ಶೇ 69ರಷ್ಟು ಜನರು ಮೋದಿಗೆ ವಿರುದ್ಧವಾಗಿ ಮತ ಹಾಕಿದ್ದರು. ಅಂದರೆ ಅವರ ಹೇಳಿಕೆಯ ಪ್ರಕಾರ  ಮತ ಹಾಕದವರು ಪಾಕಿಸ್ತಾನಕ್ಕೆ ಹೋಗಬೇಕೆ? ಮತ ಹಾಕಿದ ಶೇ 31ರಷ್ಟು ಮಂದಿ ಮಾತ್ರ ಭಾರತದಲ್ಲಿ ಉಳಿಯಬೇಕೆ?’ ಎಂದು ಅವರು ಪ್ರಶ್ನಿಸಿದರು.

ಗೋವಾದಲ್ಲಿ ಬಿಜೆಪಿ ಆಡಳಿತ ಇದೆ. ಆದರೂ ಇಲ್ಲಿ ಮುಕ್ತವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಯಾವ ಕ್ರಮ ಕೈಗೊಳ್ಳಲಿದೆ ನೋಡೋಣ ಎಂದು ಅವರು ಸವಾಲು ಹಾಕಿದರು.

ದೇಶದ ಒಟ್ಟು ಜನಸಂಖ್ಯೆಯಲ್ಲಿ  ಶೇ 9ರಷ್ಟಿರುವ ಈಶಾನ್ಯ ಭಾರತೀಯರ ಪ್ರಮುಖ ಆಹಾರ ಕೂಡ ಗೋಮಾಂಸ. ಅವರು ಕೂಡ ಪಾಕಿಸ್ತಾನಕ್ಕೆ ಹೋಗಬೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಮತೀಯ ಸಾಮರಸ್ಯ ಕದಡುವ ಇಂತಹ ಹೇಳಿಕೆ ನೀಡುವುದನ್ನು ಬಿಜೆಪಿ ಮುಖಂಡರು ನಿಲ್ಲಿಸಬೇಕು ಎಂದು ಅಪ್ಜಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.