ADVERTISEMENT

ನಗದುರಹಿತ ವ್ಯವಸ್ಥೆ: ನಾಯ್ಡು ನೇತೃತ್ವದ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ನಿಲೇಕಣಿ
ನಿಲೇಕಣಿ   

ನವದೆಹಲಿ: ದೇಶವನ್ನು ಡಿಜಿಟಲ್‌ ಅರ್ಥವ್ಯವಸ್ಥೆಯಾಗಿ ರೂಪಿಸುವ ನೀಲ ನಕ್ಷೆ ರೂಪಿಸಲು ಆರು ಮುಖ್ಯಮಂತ್ರಿಗಳಿರುವ ಸಮಿತಿಯೊಂದನ್ನು ಕೇಂದ್ರ ಸರ್ಕಾರ ಬುಧವಾರ ರಚಿಸಿದೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ನೀತಿ ಆಯೋಗದ ಉಪಾಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮಿತಿಯಲ್ಲಿ ಇರುತ್ತಾರೆ. ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನೂ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.

ಭಾರತವನ್ನು ನಗದುರಹಿತ ಅರ್ಥ ವ್ಯವಸ್ಥೆಯಾಗಿಸುವುದಕ್ಕೆ ಜಾಗತಿಕ ಮಟ್ಟದ ಅತ್ಯುತ್ತಮ ಪದ್ಧತಿಗಳನ್ನು ಗುರುತಿಸಿ ಅದನ್ನು ಇಲ್ಲಿ ಜಾರಿಗೆ ತರುವುದು ಈ ಸಮಿತಿಯ ಉದ್ದೇಶವಾಗಿದೆ.

ಸಮಿತಿಯಲ್ಲಿರುವ ಇತರ ಮುಖ್ಯಮಂತ್ರಿಗಳೆಂದರೆ ಒಡಿಶಾದ ನವೀನ್‌ ಪಟ್ನಾಯಕ್‌, ಸಿಕ್ಕಿಂನ ಪವನ್‌ ಕುಮಾರ್‌ ಚಾಮ್ಲಿಂಗ್‌, ಪುದುಚೇರಿಯ ವಿ. ನಾರಾಯಣ ಸ್ವಾಮಿ, ಮಧ್ಯಪ್ರದೇಶದ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್‌. ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ನ ಅಧ್ಯಕ್ಷ ಜನಮೇಜಯ ಸಿನ್ಹಾ, ನೆಟ್‌ಕೋರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಜೈನ್‌, ಐಸ್ಪಿರಿಟ್‌ ಸಂಸ್ಥೆಯ ಸಹ ಸಂಸ್ಥಾಪಕ ಶರದ್‌ ಶರ್ಮಾ ಮತ್ತು ಅಹಮದಾಬಾದ್‌ ಐಐಎಂನ ಪ್ರಾಧ್ಯಾಪಕ ಜಯಂತ್‌ ವರ್ಮಾ ವಿಶೇಷ ಆಹ್ವಾನಿತರು.

ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಅಭಿಯಾನ ನಡೆಸುವ ಹೊಣೆಯನ್ನು ನೀತಿ ಆಯೋಗಕ್ಕೆ ವಹಿಸಲಾಗಿದೆ. ವಿವಿಧ ರೀತಿಯ ನಗದುರಹಿತ ಪಾವತಿ ವ್ಯವಸ್ಥೆಗಳ ಬಗ್ಗೆ ಇದು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT