ADVERTISEMENT

ನಜೀಬ್‌ ಜಂಗ್‌ಗೆ ಸಿ.ಡಿ ಸಲ್ಲಿಸಿದ ಎಎಪಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2014, 9:51 IST
Last Updated 10 ಸೆಪ್ಟೆಂಬರ್ 2014, 9:51 IST

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಬಿಜೆಪಿಯನ್ನು ಆಹ್ವಾನಿಸಲು ಅನುಮತಿ ಕೋರಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಬರೆದಿರುವ ಪತ್ರವನ್ನು ಹಿಂಪಡೆಯುವಂತೆ ಲೆಫ್ಟಿನೆಂಟ್‌ ಗವರ್ನರ್‌ ಅವರಿಗೆ ಆಮ್‌ ಆದ್ಮಿಪಕ್ಷ ಬುಧವಾರ ಕೋರಿದೆ.

ಬುಧವಾರ ಲೆಫ್ಟಿನೆಂಟ್‌ ಗವರ್ನರ್ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ ಆಮ್‌ ಆದ್ಮಿ ಪಕ್ಷದ ಮುಖಂಡರು, ಶಾಸಕರ ಖರೀದಿ ವಿವಾದದ ಬಗೆಗಿನ ಸಿ.ಡಿಯನ್ನು ಸಲ್ಲಿಸಿದ್ದಾರೆ.

ದೆಹಲಿಯಲ್ಲಿ ಸರ್ಕಾರ ರಚನೆ ಕುರಿತು ಅಕ್ಟೋಬರ್‌ 10ರ ಒಳಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ADVERTISEMENT

‘ನಮ್ಮ ನಾಲ್ಕು ಶಾಸಕರನ್ನು ಬಿಜೆಪಿ ಕೊಂಡುಕೊಳ್ಳಲು ಯತ್ನಿಸಿದ ವಿಡಿಯೊ ಹೊಂದಿರುವ ಕುಟುಕು ಕಾರ್ಯಾಚರಣೆಯ ಸಿ.ಡಿಯನ್ನು ಲೆಫ್ಟಿನೆಂಟ್‌ ಗವರ್ನರ್ ಅವರಿಗೆ ಸಲ್ಲಿಸಿದ್ದೇವೆ. ಸರ್ಕಾರ ರಚನೆ ನಿಟ್ಟಿನಲ್ಲಿ ಬಿಜೆಪಿಯನ್ನು ಆಹ್ವಾನಿಸಲು ಕೋರಿ ರಾಷ್ಟ್ರಪತಿ ಅವರಿಗೆ ಸೆಪ್ಟೆಂಬರ್ 4ರಂದು ಬರೆದಿರುವ ಪತ್ರವನ್ನು ಪರಿಷ್ಕರಿಸುವಂತೆಯೂ ನಾವು ಮನವಿ ಮಾಡಿದ್ದೇವೆ’ ಎಂದು ಗೌವರ್ನರ್‌ ಜೊತೆಗಿನ ಸಭೆಯಲ್ಲಿ ಎಎಪಿ ಮುಖಸ್ಥ ಅರವಿಂದ್‌ ಕೇಜ್ರಿವಾಲ್ ಅವರೊಂದಿಗಿದ್ದ ಎಎಪಿ ನಾಯಕ ಮನಿಷ್‌ ಸಿಸೋಡಿಯಾ ತಿಳಿಸಿದ್ದಾರೆ.

ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.

‘ಕುದುರೆ ವ್ಯಾಪಾರದ ಮೂಲಕ ಬಿಜೆಪಿ ಸರ್ಕಾರ ರಚಿಸಿದರೂ ದೆಹಲಿಯ ಸಮಸ್ಯೆಗಳೇನೂ ಬಗೆಹರಿಯುವುದಿಲ್ಲ. ಅಂತಹ ಸರ್ಕಾರ ದೆಹಲಿ ಜನತೆಗೆ ಹೊರೆ ಎನಿಸುತ್ತದೆ. ಜೊತೆಗೆ ಅವರಿಗೆ ದ್ರೋಹ ಬಗೆದಂತಾಗುತ್ತದೆ’ ಎಂದು ನುಡಿದ ಸಿಸೋಡಿಯಾ, ಅಗತ್ಯ ಬಿದ್ದರೇ ರಾಷ್ಟ್ರಪತಿಗೂ ಸಿ.ಡಿಯನ್ನು ಸಲ್ಲಿಸುವುದಾಗಿ ತಿಳಿಸಿದರು.

ಜಂಗ್ ಅವರೊಂದಿಗಿನ ಭೇಟಿಯ ವೇಳೆ ದೆಹಲಿ ವಿಧಾನಸಭೆಯನ್ನು ವಿಸರ್ಜಿಸುವಂತೆಯೂ ಎಎಪಿ ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.