ADVERTISEMENT

ನಟ ಇಂದರ್‌ ಕುಮಾರ್‌ಗೆ ಏ.30ರವರೆಗೆ ಪೊಲೀಸ್‌ ಕಸ್ಟಡಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2014, 19:30 IST
Last Updated 26 ಏಪ್ರಿಲ್ 2014, 19:30 IST

ಮುಂಬೈ (ಪಿಟಿಐ): ಸಿನಿಮಾದಲ್ಲಿ ನಟಿಸಲು ಅವಕಾಶ ಕಲ್ಪಿಸುವುದಾಗಿ ನಂಬಿಸಿ ರೂಪದರ್ಶಿ ಮೇಲೆ ಅತ್ಯಾ­ಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾ­ಗಿರುವ ಬಾಲಿವುಡ್‌ ನಟ ಇಂದರ್‌ ಕುಮಾರ್‌ ಸರಾಫ್‌ ಅವರನ್ನು ಇಲ್ಲಿನ ಬಾಂದ್ರಾ ಮ್ಯಾಜಿಸ್ಟೇರಿಯಲ್‌ ಕೋರ್ಟ್‌ ಏಪ್ರಿಲ್‌ 30ರವರೆಗೆ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ಶನಿವಾರ ಆದೇಶ ನೀಡಿದೆ.

ಇಲ್ಲಿನ ಅಂಧೇರಿ ಉಪನಗರ­ದಲ್ಲಿರುವ  ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ರಾತ್ರಿಯಿಂದಲೂ ಇಂದರ್‌ ಕುಮಾರ್‌  ಬಲವಂತವಾಗಿ ಕೂಡಿಟ್ಟು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಯುವತಿ ಆರೋಪಿಸಿದ್ದಳು. ಇದರಿಂದ ಇಂದರ್‌ ನನ್ನು ಶುಕ್ರವಾರ ಸಂಜೆ ಪೊಲೀಸರು ಬಂಧಿಸಿದ್ದರು. 23 ವರ್ಷದ ಯುವತಿಯು ಗುರುವಾರ ತಡರಾತ್ರಿ ಇಂದರ್‌ ಕುಮಾರ್‌ ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಇಂದರ್‌ ಬಿಯರ್‌ ಬಾಟಲ್‌ನಿಂದ ಹೊಡೆದಿ­ದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆಕೆಯ ದೇಹದ ಮೇಲೆ ಸುಟ್ಟ ಗಾಯಗಳಿದ್ದು, ಸಿಗರೇಟ್‌­ನಿಂದ ಸುಟ್ಟಿರುವ ಸಾಧ್ಯತೆ ಇದೆ ಎಂದು ವರ್ಸೊವಾ ಪೊಲೀಸರು ತಿಳಿಸಿದ್ದಾರೆ.

ಇಂದರ್‌ ಕುಮಾರ್‌ ಬಾಲಿವುಡ್‌ನ ‘ವಾಂಟೆಡ್‌’, ‘ಮಾ ತುಝೆ ಸಲಾಂ’, ‘ಬಾಘಿ’, ‘ಖಿಲಾಡಿಯೊಂಕಾ ಖಿಲಾಡಿ’ ಮತ್ತು ‘ಮಾಸೂಮ್‌’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾನೆ.

ಯುವತಿಯ ಸಮ್ಮತಿಯಿಂದಲೇ ಲೈಂಗಿಕತೆ ನಡೆಸಿದ್ದಾಗಿ ವಿಚಾರಣೆ ವೇಳೆ ಇಂದರ್‌ಕುಮಾರ್ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ನಟನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ­ಕೊಳ್ಳಲಾ­ಗಿದೆ.  ಇಂದರ್‌ ಪತ್ನಿಯೊಂದಿಗೆ ವಿರಸ ಹೊಂದಿದ್ದ. ಹೀಗಾಗಿಯೇ ಪತಿ-ಹಾಗೂ ಪತ್ನಿ ಒಂದೇ ಅಪಾರ್ಟ್‌­ಮೆಂಟ್‌ನಲ್ಲಿ ಪ್ರತ್ಯೇಕವಾಗಿ ವಾಸಿಸು­ತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.