ADVERTISEMENT

ನದಿಗೆ ಬಿದ್ದ ಬಸ್‌: 50 ಜನರ ಸಾವು?

ಜಮ್ಮು–ಕಾಶ್ಮೀರದಲ್ಲಿ ಭಾರಿ ಮಳೆಗೆ 20 ಬಲಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2014, 19:30 IST
Last Updated 4 ಸೆಪ್ಟೆಂಬರ್ 2014, 19:30 IST

ಶ್ರೀನಗರ/ಜಮ್ಮು(ಪಿಟಿಐ): ರಾಜ್ಯದಲ್ಲಿ ಗುರುವಾರ ಭಾರಿ ಮಳೆ ಮತ್ತು ಪ್ರವಾಹದಿಂದ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ 60ಕ್ಕೂ ಹೆಚ್ಚು ಜನರು ಬಲಿಯಾಗಿರುವ ಶಂಕೆ ಇದೆ. ರಜೌರಿ ಜಿಲ್ಲೆಯಲ್ಲಿ ಸೇತುವೆ ದಾಟುತ್ತಿದ್ದ ಮದುವೆ ದಿಬ್ಬಣದ ಬಸ್‌ ಗಂಭೀರ್‌ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ವರ ಮತ್ತು ವಧು ಸೇರಿದಂತೆ ಬಸ್‌ನಲ್ಲಿದ್ದ 50 ಜನರು ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಸಾವನ್ನಪ್ಪಿರುವ ಶಂಕೆ ಇದೆ.

ದುರಂತ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಯೋಧರು ಬಸ್‌ ಚಾಲಕ ಮತ್ತು ನಿರ್ವಾಹಕ ಸೇರಿದಂತೆ ನಾಲ್ವರನ್ನು ರಕ್ಷಿಸಿದ್ದಾರೆ. ಬಸ್‌ನಲ್ಲಿ ಮದುವೆ ದಿಬ್ಬಣದ 50ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್‌ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ ಎನ್ನಲಾಗಿದೆ.  ಸಂಜೆಯವರೆಗೆ ಮುಂದುವರೆದ ಕಾರ್ಯಾ­ಚರಣೆಯಲ್ಲಿ  ದುರಂತಕ್ಕೀ­ಡಾದ ಬಸ್‌ ಹಾಗೂ ಅದರಲ್ಲಿದ್ದ 50 ಜನ  ಪತ್ತೆಯಾಗಿಲ್ಲ. 

ಮುಂದುವರಿದ ಧಾರಾಕಾರ ಮಳೆ: ಪೂಂಚ್‌, ದೋಡಾ, ಅನಂತನಾಗ್, ಬಾರಾಮುಲ್ಲಾ ಹಾಗೂ  ಬದಗಾಂ ಜಿಲ್ಲೆಯಲ್ಲಿ  ಸುರಿಯುತ್ತಿರುವ ಧಾರಾ­ಕಾರ ಮಳೆ ಮತ್ತು ಪ್ರವಾಹಕ್ಕೆ  ಸೇನಾ­ಧಿಕಾರಿ ಮತ್ತು ಯೋಧ ಸೇರಿ ಒಟ್ಟು 20 ಜನ ಬಲಿಯಾಗಿದ್ದಾರೆ. ಪೂಂಚ್‌ನಲ್ಲಿ ಮೂವರು   ಹಾಗೂ ರೀಸಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. 

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಬಲ್ಬೀರ್‌ ಸಿಂಗ್‌ ಎಂಬ  ಯೋಧ  ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಭೂಕುಸಿತದಿಂದ ಗಡಿ ಭದ್ರತಾ ಪಡೆಯ ಅಧಿಕಾರಿ ಜೀವಂತ ಸಮಾಧಿ­ಯಾಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.