ADVERTISEMENT

ನೋಟು ಅಮಾನ್ಯೀಕರಣದಿಂದ ಎಷ್ಟು ಜನರಿಗೆ ಅನುಕೂಲವಾಯಿತು?: ನಿತೀಶ್‌ ಕುಮಾರ್‌

ಏಜೆನ್ಸೀಸ್
Published 27 ಮೇ 2018, 5:30 IST
Last Updated 27 ಮೇ 2018, 5:30 IST
ನಿತೀಶ್‌ ಕುಮಾರ್‌ (ಸಂಗ್ರಹ ಚಿತ್ರ)
ನಿತೀಶ್‌ ಕುಮಾರ್‌ (ಸಂಗ್ರಹ ಚಿತ್ರ)   

ಪಟನಾ: ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ರಾಜ್ಯಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ಕ್ರಮವನ್ನು ಇದೇ ಮೊದಲ ಬಾರಿಗೆ ಪ್ರಶ್ನಿಸಿದ್ದಾರೆ.

ಬ್ಯಾಂಕ್‌ ಅಧಿಕಾರಿಗಳೊಂದಿಗೆ ಪಟನಾದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡುತ್ತ, ‘ನಾನು ಸಹ ನೋಟು ಅಮಾನ್ಯೀಕರಣದ ಪರವಾಗಿದ್ದೆ. ಆದರೆ, ಆ ಕ್ರಮದಿಂದ ಎಷ್ಟು ಜನರಿಗೆ ಅನುಕೂಲವಾಯಿತು?, ಆ ಸಮಯದಲ್ಲಿ ಕೆಲವರು ಸುಲಭವಾಗಿ ನಗದನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಿದರು’ ಎಂದು ಹೇಳಿದರು.

‘ನೀವು(ಬ್ಯಾಂಕ್‌ಗಳು) ಸಾಲ ಪಡೆದುಕೊಂಡು ಮಾಯವಾಗುವ ಪ್ರಭಾವಿಗಳನ್ನು ಬಿಟ್ಟು ಜನಸಾಮಾನ್ಯರು ಪಡೆದ ಸಾಲವನ್ನು ವಸೂಲಿ ಮಾಡಲು ಹೆಚ್ಚು ಆಸಕ್ತಿ ತೋರುತ್ತೀರಿ. ಆಶ್ಚರ್ಯಕರ ಸಂಗತಿಯೆಂದರೆ, ಪ್ರಭಾವಿಗಳ ವಂಚನೆ ಕುರಿತು ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯತೆ ಇದೆ’ ಎಂದರು.

ADVERTISEMENT

‘ನಾನು ಟೀಕೆ ಮಾಡುತ್ತಿಲ್ಲ. ವ್ಯವಸ್ಥೆ ಬಗೆಗಿನ ಕಾಳಜಿಯಿಂದ ಹೇಳುತ್ತಿದ್ದೇನೆ’ ಎಂದು ಅವರು ಸಮಜಾಯಿಷಿ ನೀಡಿದರು.

2016ರಲ್ಲಿ ನೋಟು ಅಮಾನ್ಯೀಕರಣ ಮಾಡಿದಾಗ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜತೆಗೂಡಿ ಸರ್ಕಾರ ನಡೆಸುತ್ತಿದ್ದ ನಿತೀಶ್‌ ಕುಮಾರ್‌ ‘ಇದೊಂದು ಸಾಹಸಮಯ ನಡೆ’ ಎಂದು ಪ್ರತಿಕ್ರಿಯೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.