ADVERTISEMENT

ನ್ಯಾಯಾಧೀಶೆಗೆ ಲೈಂಗಿಕ ಕಿರುಕುಳ: ನ್ಯಾಯಮೂರ್ತಿ ಹೊಣೆ ಮುಕ್ತಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ):  ಮಾಜಿ ಜಿಲ್ಲಾ ನ್ಯಾಯಾಧೀಶೆಯೊಬ್ಬರಿಗೆ ಲೈಂಗಿಕ ಕಿರು­ಕುಳ ನೀಡಿರುವ ಆರೋಪ ಎದುರಿಸುತ್ತಿ­ರುವ ಹೈಕೋರ್ಟ್‌ ನ್ಯಾಯಮೂರ್ತಿ­ಯನ್ನು ಆಡಳಿತಾತ್ಮಕ ಹಾಗೂ ಮೇಲು­ಸ್ತುವಾರಿ ಹೊಣೆಯಿಂದ ಮುಕ್ತಗೊಳಿ­ಸು­ವಂತೆ ಸುಪ್ರೀಂಕೋರ್ಟ್‌ ಮಧ್ಯ­ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯ­ಮೂರ್ತಿಗೆ ಸೂಚಿಸಿದೆ.

ಮುಕ್ತ ಮತ್ತು ನಿಷ್ಪಕ್ಷಪಾತ  ತನಿಖೆ ನಡೆಯಬೇಕಾದಲ್ಲಿ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ನ್ಯಾಯ­ಮೂರ್ತಿಯನ್ನು ಎಲ್ಲ ಹೊಣೆಯಿಂದ ಮುಕ್ತಗೊಳಿಸಬೇಕು  ಎಂದು ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ನೇತೃತ್ವದ ಪೀಠ ಆದೇಶ ನೀಡಿದೆ.

ಲೈಂಗಿಕ ಕಿರುಕುಳ ಪ್ರಕರಣದ ಕುರಿತು ತನಿಖೆ ನಡೆಸಲು ಇಬ್ಬರು ನ್ಯಾಯ­ಮೂರ್ತಿಗಳ ವಿಚಾರಣಾ ಸಮಿತಿ ನೇಮಿ­ಸುವಾಗ ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶ ನೀಡಿದ್ದಾರೆ. ಎರಡನೇ ಹಂತದ ಆಂತರಿಕ ತನಿಖೆ ನಡೆಸಲು ಆದೇಶ ನೀಡುವ ಅಧಿಕಾರ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿಗೆ ಮಾತ್ರ ಇದೆ ಎಂದೂ ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಈಗ ಮತ್ತೆ ಆಂತರಿಕ ತನಿಖೆ ಆರಂಭಿಸಬಹುದು. ಇಲ್ಲವೇ ಇನ್ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ತನಿಖೆ ಆರಂಭಿಸುವಂತೆ ಸೂಚಿಸಬಹುದು ಎಂದೂ ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಗ್ವಾಲಿಯರ್‌ನ ಕೋರ್ಟ್‌ನ ಮಾಜಿ ನ್ಯಾಯಾಧೀಶೆ ಹೈಕೋರ್ಟ್‌ ತನಿಖಾ ಸಮಿತಿ ನೇಮಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.