ADVERTISEMENT

ಪಠ್ಯಕ್ರಮದಲ್ಲಿ ರಾಷ್ಟ್ರೀಯತೆಯನ್ನು ಬೋಧಿಸುವ ಪಾಠಗಳಿರಲಿ: ವಾಸುದೇವ್ ದೇವ್‍ನಾನಿ

ಏಜೆನ್ಸೀಸ್
Published 21 ಜುಲೈ 2017, 12:21 IST
Last Updated 21 ಜುಲೈ 2017, 12:21 IST
ಪಠ್ಯಕ್ರಮದಲ್ಲಿ ರಾಷ್ಟ್ರೀಯತೆಯನ್ನು ಬೋಧಿಸುವ ಪಾಠಗಳಿರಲಿ: ವಾಸುದೇವ್ ದೇವ್‍ನಾನಿ
ಪಠ್ಯಕ್ರಮದಲ್ಲಿ ರಾಷ್ಟ್ರೀಯತೆಯನ್ನು ಬೋಧಿಸುವ ಪಾಠಗಳಿರಲಿ: ವಾಸುದೇವ್ ದೇವ್‍ನಾನಿ   

ಜೈಪುರ: ರಾಜಸ್ಥಾನ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ವಾಸುದೇವ್ ದೇವ್‍ನಾನಿ ಅವರು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ)ಯು ಪಠ್ಯಕ್ರಮದಲ್ಲಿ ರಾಷ್ಟ್ರೀಯತೆಯನ್ನು ಬಿಂಬಿಸುವ ಪಠ್ಯಗಳನ್ನು ಅಳವಡಿಸಿಕೊಳ್ಳುವ ಕಡೆಗೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

ಪಠ್ಯಕ್ರಮ ಪರಿಶೀಲನೆ ಸಂಬಂಧ ರಾಜಸ್ಥಾನದಲ್ಲಿ ನಡೆದ ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಮತ್ತು ಎನ್‌ಸಿಇಆರ್‌ಟಿ ಸಭೆಯಲ್ಲಿ ಅವರು ಈ ರೀತಿ ಸಲಹೆ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೇಂದ್ರೀಯ ಶಿಕ್ಷಣ ಸಲಹಾ ಮಂಡಳಿ ಮತ್ತು ಎನ್‌ಸಿಇಆರ್‌ಟಿಗಳು ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಸಲಹೆಗಳನ್ನು ಕೇಳಿದ್ದವು. ಹಾಗಾಗಿ ಪಠ್ಯಕ್ರಮದಲ್ಲಿ ಪ್ರತಿಯೊಂದು ರಾಜ್ಯದ ಸ್ಥಳೀಯ ನಾಯಕರಿಗೆ ಸಂಬಂಧಿಸಿದಂತೆ ಪಠ್ಯಗಳನ್ನು ಅಳವಡಿಕೊಳ್ಳಬೇಕು. ಆ ಮೂಲಕ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಅವರ ಮಾತೃಭಾಷೆಯಲ್ಲಿಯೇ ರಾಷ್ಟ್ರೀಯತೆಯ ಬಗ್ಗೆ ಬೋಧಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದೇನೆ’ ಎಂದರು.

ADVERTISEMENT

‘ರಾಜಸ್ಥಾನದ ಶೈಕ್ಷಣಿಕ ಪಠ್ಯಕ್ರಮದಲ್ಲಿ ‘ನೋಟು ರದ್ದು’, ‘ಸ್ವಚ್ಛ ಭಾರತ ಅಭಿಯಾನ’ಗಳಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪ್ರಮುಖ ಯೋಜನೆಗಳ ಬಗ್ಗೆ ಪಠ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಸಭೆಯಲ್ಲಿ ನಮ್ಮ ಕಾರ್ಯವನ್ನು ಶ್ಲಾಘಿಸಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.