ADVERTISEMENT

ಪತ್ರಿಕಾ ಸ್ವಾತಂತ್ರ್ಯ ಜಾಣ್ಮೆಯಿಂದ ಬಳಸಿ

ಮಾಧ್ಯಮಗಳ ವಿಶ್ವಾಸಾರ್ಹತೆ ಹೆಚ್ಚಬೇಕು ಎಂದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 19:30 IST
Last Updated 6 ನವೆಂಬರ್ 2017, 19:30 IST
ಚೆನ್ನೈನಲ್ಲಿ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಕರುಣಾನಿಧಿ ಮಕ್ಕಳಾದ ಸ್ಟಾಲಿನ್, ಕನಿಮೋಳಿ ಇದ್ದರು – ಪಿಟಿಐ ಚಿತ್ರ
ಚೆನ್ನೈನಲ್ಲಿ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ನಿವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ಕರುಣಾನಿಧಿ ಮಕ್ಕಳಾದ ಸ್ಟಾಲಿನ್, ಕನಿಮೋಳಿ ಇದ್ದರು – ಪಿಟಿಐ ಚಿತ್ರ   

ಚೆನ್ನೈ: ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಮಾಧ್ಯಮಗಳು ತಮ್ಮ ಸಂಪಾದಕೀಯ ಸ್ವಾತಂತ್ರ್ಯವನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದರು.

ತಮಿಳು ದಿನಪತ್ರಿಕೆ ‘ತಂತಿ’ಯ 75ನೇ ವರ್ಷಾಚರಣೆಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ಮಾಧ್ಯಮಗಳು ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳಲು ಇನ್ನಷ್ಟು ಶ್ರಮ ವಹಿಸಬೇಕು ಎಂದರು. ಮಾಧ್ಯಮ ಖಾಸಗಿ ವ್ಯಕ್ತಿಯ ಒಡೆತನದಲ್ಲಿದ್ದರೂ ಅದು ಸಾರ್ವಜನಿಕ ಉದ್ದೇಶಕ್ಕಾಗಿ ಕೆಲಸ ಮಾಡುತ್ತದೆ ಎಂದು ಮೋದಿ ಹೇಳಿದರು.

‘ಬರೆಯುವ ಸ್ವಾತಂತ್ರ್ಯ ಹಾಗೂ ಏನನ್ನು ಬರೆಯಬೇಕೆಂಬ ನಿರ್ಧಾರದಲ್ಲಿ ತಪ್ಪನ್ನು ಬರೆಯುವ ಸ್ವಾತಂತ್ರ್ಯ ಸೇರುವುದಿಲ್ಲ. ಮಾಧ್ಯಮಗಳಿಗೂ ಚುನಾಯಿತ ಸರ್ಕಾರ ಹಾಗೂ ನ್ಯಾಯಾಂಗಕ್ಕೆ ಇದ್ದಷ್ಟೇ ಸಾಮಾಜಿಕ ಹೊಣೆಗಾರಿಕೆಯೂ ಇದೆ’ ಎಂದು ಪ್ರಧಾನಿ ಹೇಳಿದರು.

ADVERTISEMENT

‘ಬಹುತೇಕ ಮಾಧ್ಯಮಗಳು ರಾಜಕೀಯ ಕೇಂದ್ರಿತ ವರದಿಗಳನ್ನು ಮಾಡುತ್ತವೆ. ಆದರೆ ಸಾಮಾನ್ಯ ಜನರ ಸಾಧನೆಗಳ ಮೇಲೂ ಅವು ಬೆಳಕು ಚೆಲ್ಲಬೇಕು. ಭಾರತ ಎಂದರೆ ಕೇವಲ ರಾಜಕಾಣಿಗಳಲ್ಲ. 125 ಕೋಟಿ ಜನರಿಂದ ಭಾರತವಾಗಿದೆ. ಮಾಧ್ಯಮಗಳು ಜನರ ಕತೆಗಳು ಹಾಗೂ ಅವರ ಸಾಧನೆಗಳನ್ನು ಪ್ರಕಟಿಸಲು ಹೆಚ್ಚು ಗಮನಹರಿಸಿದರೆ ನಾನು ಸಂತೋಷಪಡುತ್ತೇನೆ’ ಎಂದರು.

ವಿಶ್ವಾಸಾರ್ಹ ಮಾಧ್ಯಮ ವೇದಿಕೆಗಳ ಆರೋಗ್ಯಕರ ಸ್ಪರ್ಧೆಯು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯದು ಎಂದೂ ಅವರು ಅಭಿಪ್ರಾಯಪಟ್ಟರು.

ಜಾಗತಿಕ ಹವಾಮಾನ ವೈಪರೀತ್ಯವು ಜಗತ್ತಿನೆಲ್ಲೆಡೆ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾಧ್ಯಮಗಳು ಒಂದಿಷ್ಟು ಜಾಗವನ್ನು ತೆಗೆದಿರಿಸಬೇಕು ಎಂದು ಅವರು ಸಲಹೆ ನೀಡಿದರು. ‘ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟವನ್ನು ಮುನ್ನಡೆಸಲು ಮಾಧ್ಯಮಗಳು ಸಿದ್ಧವಿವೆಯೇ? ಎಂದು ಪ್ರಶ್ನಿಸಿದರು.

ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿದು ಬಂದು ಮೋದಿ ಅವರು ನಟ ರಜನಿಕಾಂತ್ ಅವರ ಕೈ ಕುಲುಕಿ ಶುಭಾಶಯ ಕೋರಿದರು.

ನೆರವಿಗೆ ಸಿದ್ಧ: ಮಳೆಯಿಂದ ಸಂಕಷ್ಟಕ್ಕೀಡಾಗಿರುವ ತಮಿಳುನಾಡಿಗೆ ಅಗತ್ಯವಿರುವ ಎಲ್ಲ ನೆರವು ನೀಡಲು ಸಿದ್ಧ ಎಂದು ಪ್ರಧಾನಿ ಭರವಸೆ ನೀಡಿದರು. ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

ಮಳೆ ಹಾನಿ ಪರಿಹಾರಕ್ಕಾಗಿ ₹1500 ನೆರವು ನೀಡುವಂತೆ ತಮಿಳುನಾಡು ಸರ್ಕಾರ ಪ್ರಧಾನಿಗೆ ಮನವಿ ಸಲ್ಲಿಸಿತು.
*
ಕರುಣಾನಿಧಿ ಭೇಟಿ

ಚೆನ್ನೈ ಭೇಟಿ ವೇಳೆ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ಗೋಪಾಲಪುರಂನ ಕರುಣಾನಿಧಿ ನಿವಾಸಕ್ಕೆ ಬಂದ ಮೋದಿ ಅವರನ್ನು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಶಾಲು ಹೊದಿಸಿ ಸ್ವಾಗತಿಸಿದರು.

ಬಳಿಕ ಕರುಣಾನಿಧಿ ಅವರ ಜೊತೆ ಮೋದಿ 20 ನಿಮಿಷ ಮಾತುಕತೆ ನಡೆಸಿದರು. ಮೋದಿ ಅವರ ಜೊತೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಸಚಿವರಾದ ನಿರ್ಮಲಾ ಸೀತಾರಾಮನ್, ಪೊನ್ ರಾಧಾಕೃಷ್ಣನ್ ಮತ್ತು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸೌಂದರ್‌ರಾಜನ್ ಉಪಸ್ಥಿತರಿದ್ದರು. ಕರುಣಾನಿಧಿ ಪುತ್ರಿ ಕನಿಮೋಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.