ADVERTISEMENT

ಪೀಟರ್‌ ಹಣಕಾಸು ವ್ಯವಹಾರದ ಬಗ್ಗೆ ತನಿಖೆ

ಶೀನಾ ಬೋರಾ ಕೊಲೆ ಪ್ರಕರಣ: ಮುಂದುವರೆದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಮುಂಬೈ (ಪಿಟಿಐ): ಶೀನಾ ಬೋರಾ ಕೊಲೆ ‍ಪ್ರಕರಣದ ಆರೋಪಿ ಇಂದ್ರಾಣಿ ಮುಖರ್ಜಿ ಅವರ ಪತಿ ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್‌ ಮುಖರ್ಜಿ ಗುರುವಾರ ಮತ್ತೊಮ್ಮೆ ಮುಂಬೈ ಪೊಲೀಸರ ಮುಂದೆ ಹಾಜರಾಗಿದ್ದು ಹೇಳಿಕೆ ನೀಡಿದ್ದಾರೆ. ಬುಧವಾರ ಖಾರ್‌ ಪೊಲೀಸ್‌ ಠಾಣೆಯಲ್ಲಿ ಅಧಿಕಾರಿಗಳು 12 ಗಂಟೆಗೂ ಹೆಚ್ಚು ಕಾಲ ಪೀಟರ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಪೀಟರ್‌ ಅವರನ್ನು ಪೊಲೀಸರು ಅವರ ಆರ್ಥಿಕ ವ್ಯವಹಾರಗಳ ಬಗ್ಗೆ ಹೆಚ್ಚಾಗಿ ಪ್ರಶ್ನಿಸಿದ್ದಾರೆ. ಪತ್ನಿ ಇಂದ್ರಾಣಿ, ಮಗ ರಾಹುಲ್‌, ಮಲಮಗಳು ವಿಧಿ ಹಾಗೂ ಶೀನಾ ಬೋರಾಳಿಗೆ ಎಷ್ಟು ಹಣ ನೀಡಲಾಗಿದೆ. ಯಾವ್ಯಾವ ಕಂಪೆನಿಗಳಲ್ಲಿ ಪೀಟರ್‌ ಷೇರು ಹೊಂದಿದ್ದಾರೆ ಎಂದು ಕೇಳಲಾಗಿದೆ.

ಪೀಟರ್‌ ಅವರು ಠಾಣೆಗೆ ಬಂದ 2 ಗಂಟೆಗಳ ಬಳಿಕ ಪೊಲೀಸ್ ವಶದಲ್ಲಿ ಇರುವ ಇಂದ್ರಾಣಿ ಅವರನ್ನು ಬಾಂದ್ರಾ ಲಾಕಪ್‌ನಿಂದ  ಕರೆ ತರಲಾಯಿತು. ಪೀಟರ್‌ ಅವರಿಗೆ ಕೇಳಿದ ಪ್ರಶ್ನೆಗಳನ್ನೇ ಇಂದ್ರಾಣಿ ಅವರಿಗೂ ಕೇಳಲಾಗಿದೆ. ಈ ಇಬ್ಬರ ಹೇಳಿಕೆಗಳನ್ನು ಪೊಲೀಸರು ಹೋಲಿಸಿ ನೋಡುತ್ತಿದ್ದಾರೆ ಎನ್ನಲಾಗಿದೆ.

ಈ ನಡುವೆ ವಿಧಿವಿಜ್ಞಾನ ಪ್ರಯೋಗಾಲಯವು ಇಂದ್ರಾಣಿ ಹಾಗೂ  ಶೀನಾ ಬೋರಾ ಶವದ ಡಿಎನ್‌ಎ ಮಾದರಿಗಳನ್ನು ಹೋಲಿಸಲು ಪ್ರಕ್ರಿಯೆ ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ತಜ್ಞರ ನೆರವು ಪಡೆದಿರುವ ಪೊಲೀಸರು ಇಂದ್ರಾಣಿ, ಶಿನಾ, ಸಂಜೀವ್‌ ಖನ್ನಾ ಅವರ ಇ–ಮೇಲ್‌, ಫೇಸ್‌ಬುಕ್‌ ಪುಟ ಹಾಗೂ ಸ್ಕೈಪ್‌ ಸಂಭಾಷಣೆಗಳ ವಿವರ ಪಡೆಯಲು ಯತ್ನಿಸುತ್ತಿದ್ದಾರೆ.

ಕಾರಿಗಾಗಿ ಹುಡುಕಾಟ: ಈ ನಡುವೆ ಶೀನಾಳನ್ನು ಕೊಲೆ ಮಾಡಲಾದ ಕಾರಿಗಾಗಿ ಹುಡುಕಾಟ ನಡೆದಿದೆ. ಇಂದ್ರಾಣಿ ಮುಖರ್ಜಿ ಕಾರ್‌ ಬುಕ್‌ ಮಾಡಿದ್ದ ಏಜೆನ್ಸಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಾರನ್ನು ಪೀಟರ್‌ ಮುಖರ್ಜಿ ಹೆಸರಿನಲ್ಲಿ ಬುಕ್‌ ಮಾಡಲಾಗಿತ್ತು. ಆ ಸಮಯದಲ್ಲಿ ಪೀಟರ್‌ ಮಲಮಗಳು ವಿಧಿಯೊಂದಿಗೆ ವಿದೇಶದಲ್ಲಿ ಇದ್ದರು. ಕೊಲೆ ನಡೆಯುವ ಕೆಲ ದಿನಗಳ ಮುಂಚೆ ಮುಂಬೈಗೆ ಬಂದ ಇಂದ್ರಾಣಿ ಬಾಡಿಗೆ ಕಾರು ಪಡೆದು ಈ ಕೃತ್ಯ ಎಸಗಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.