ADVERTISEMENT

ಪುನಶ್ಚೇತನದ ಹಳಿಯ ಮೇಲೆ...

58 ಹೊಸ ರೈಲು * ಹೊಸದಾಗಿ ದರ ಏರಿಕೆ ಇಲ್ಲ * ಮುಂಗಡ ಟಿಕೆಟ್‌ ವ್ಯವಸ್ಥೆ ಆಧುನೀಕರಣ * ಆನ್‌ಲೈನ್‌ ಮೂಲಕ ಪ್ಲಾಟ್‌ಫಾರ್ಮ್‌ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ: ಹತ್ತು ವರ್ಷಗಳಿಂದ ಜನಪ್ರಿಯತೆ ಹಳಿಯ ಮೇಲೆಯೇ ಸಾಗುತ್ತಾ ಬಂದ ರೈಲ್ವೆ ಇಲಾಖೆ­ಯಲ್ಲಿ ಆರ್ಥಿಕ ಶಿಸ್ತು ಮೂಡಿಸಿ
ಪುನ­ಶ್ಚೇತನದ ಜಾಡಿಗೆ ತರುವ ಪ್ರಯತ್ನವನ್ನು ಹೊಸ­ದಾಗಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ಮಂಗಳವಾರ ಮಂಡಿಸಿದ ಮೊದಲ ರೈಲ್ವೆ ಬಜೆಟ್‌ನಲ್ಲಿ ಮಾಡಿದೆ.

ದೇಶೀಯ ಖಾಸಗಿ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಭಾಗಶಃ ಅವಕಾಶ, ಪ್ರಯಾ­ಣಿಕರ ಸುರಕ್ಷತೆ, ಕಾಲಮಿತಿ­ಯೊಳಗೆ ಕಾಮ­ಗಾ­ರಿಗಳ ಅನುಷ್ಠಾನ, ಹೆಚ್ಚಿನ ಸೇವಾ ಸೌಲಭ್ಯ, ಶುಚಿತ್ವ ಪಾಲನೆ, ಸಂಪನ್ಮೂಲ ಕ್ರೋಡೀಕರಣ, ಮಾಹಿತಿ ತಂತ್ರಜ್ಞಾನದ ಬಳಕೆ ಮತ್ತು ಪಾರ­ದರ್ಶಕತೆಯೊಂದಿಗೆ ವ್ಯವಸ್ಥೆಯನ್ನು ಸುಧಾರಿಸುವ ಪ್ರಸ್ತಾವಗಳು ರೈಲ್ವೆ ಸಚಿವ ಡಿ.ವಿ.­ಸದಾನಂದ ಗೌಡ ಅವರು ಮಂಡಿಸಿದ ಬಜೆಟ್‌­ನಲ್ಲಿವೆ. ಕೆಲವೇ ದಿನಗಳ ಹಿಂದಷ್ಟೇ ಬಜೆಟ್‌­ಗಿಂತ ಮುಂಚಿತವಾಗಿಯೇ ಪ್ರಯಾಣ ದರವನ್ನು ಶೇ 14.2ರಷ್ಟು ಹೆಚ್ಚಿಸಿದ್ದ ಸರ್ಕಾರ ನಿರೀಕ್ಷೆಯಂತೆಯೇ ಬಜೆಟ್‌ನಲ್ಲಿ ಅದನ್ನು ಮುಟ್ಟಲು ಹೋಗಿಲ್ಲ.

ಎಫ್‌ಡಿಐ ಗೆ ಸಂಬಂಧಿಸಿದಂತೆ, ಸರ್ಕಾರ ಜಾಗ­ರೂ­ಕವಾದ ಹೆಜ್ಜೆ ಇರಿಸಿದೆ. ಮೂಲಸೌಕರ್ಯ ನಿರ್ಮಾಣದಲ್ಲಿ ಮಾತ್ರ ಎಫ್‌ಡಿಐಗೆ ಅವಕಾಶ ನೀಡಲಾಗಿದ್ದು ಸಂಚಾರ ನಿರ್ವಹಣೆಯಲ್ಲಿ ಅವಕಾಶವನ್ನು ನೀಡಿಲ್ಲ.

ಪ್ರಯಾಣ ಸುರಕ್ಷತೆ ದೃಷ್ಟಿಯಿಂದ ರೈಲು ಹಳಿಗಳ ಬಿರುಕು ಪತ್ತೆ ಹಚ್ಚಲು ಅಲ್ಟ್ರಾ ಸೋನಾರ್‌ ತಂತ್ರಜ್ಞಾನ ಅಳವಡಿಸಲು ನಿರ್ಧರಿಸ­ಲಾಗಿದೆ. ಸುಗಮ ಸಂಚಾರಕ್ಕಾಗಿ  ಕಾವಲುರಹಿತ ಲೆವೆಲ್‌ ಕ್ರಾಸಿಂಗ್‌ಗಳನ್ನು ತಗ್ಗಿಸಿ ಮೇಲ್ಸೇತುವೆ ಹಾಗೂ ಕೆಳ ಮಾರ್ಗಗಳ

ರೈಲ್ವೆ ಸಚಿವ ಸದಾನಂದ ಗೌಡ ಅವರು ಬಜೆಟ್‌ ಭಾಷಣ ಮುಗಿಸುವ ಮುನ್ನ ಉಲ್ಲೇಖಿಸಿದ ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ದ ಸಾಲುಗಳಿವು.
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ|
ಇಂದು ನಂಬಿಹುದೆ ಮುಂದೆಂದುಮೆಂದಲ್ಲ || ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು|
ಇಂದಿಗೀ ಮತವುಚಿತ- ಮಂಕುತಿಮ್ಮ ||


58 ಹೊಸ ರೈಲುಗಳ ಪ್ರಸ್ತಾಪ
ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ 5 ಹೊಸ ‘ಜನಸಾಧಾರಣ್‌’, ಐದು ಅಧಿಕ ಶುಲ್ಕದ ಐಷಾರಾಮಿ ರೈಲು ಸೇರಿದಂತೆ ಒಟ್ಟು 58 ಹೊಸ ರೈಲು ಸೇವೆಗಳನ್ನು ಆರಂಭಿಸುವ ಕುರಿತು ಪ್ರಸ್ತಾಪ ಮಾಡಲಾಗಿದೆ.
ಇದರಲ್ಲಿ 6 ಎಸಿ ಎಕ್ಸ್‌ಪ್ರೆಸ್‌ ರೈಲುಗಳು, 27 ಎಕ್ಸ್‌­ಪ್ರೆಸ್‌­ಗಳು, 8 ಪ್ಯಾಸೆಂಜರ್‌ಗಳು, 2 ವಿದ್ಯುತ್‌ ಚಾಲಿತ ರೈಲುಗಳು (ಮೆಮು), 5 ಡಿಸೇಲ್‌ ಚಾಲಿತ ರೈಲುಗಳು (ಡೆಮು) ಸೇರಿವೆ. ಅಲ್ಲದೆ, ಇದರೊಂದಿಗೆ 10 ಜೋಡಿ ರೈಲು ಮಾರ್ಗಗಳ ಸಮೀಕ್ಷೆ ನಡೆಸುವುದಾಗಿ ರೈಲ್ವೆ ಸಚಿವರು ಘೋಷಿಸಿದ್ದಾರೆ.

ನಿರ್ಮಾಣಕ್ಕೆ ಸಾಕಷ್ಟು ಹಣ ಮೀಸಲಿಡಲಾಗಿದೆ. ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ ಲಭ್ಯತೆಗಾಗಿ ‘ಬ್ರ್ಯಾಂಡೆಡ್‌ ಫುಡ್‌’ ಒದಗಿಸಲು ನಿರ್ಧರಿಸಲಾಗಿದೆ.

ಟಿಕೆಟ್‌ ಮುಂಗಡ ಬುಕಿಂಗ್‌ ಮತ್ತು ಇ–ಟಿಕೆಟಿಂಗ್‌ ವ್ಯವಸ್ಥೆ ಸುಧಾರಣೆಗೆ ಗಮನ ನೀಡ­ಲಾಗಿದೆ. ಇನ್ನು ಮುಂದೆ ಪ್ಲಾಟ್‌ಫಾರ್ಮ್‌ ಟಿಕೆಟ್‌ ಹಾಗೂ ಮುಂಗಡ ಬುಕಿಂಗ್‌ ಅಲ್ಲದ ಸಾಮಾನ್ಯ ಟಿಕೆಟ್ಟನ್ನೂ ಅಂತರ್ಜಾಲದಲ್ಲೇ ಪಡೆ­ಯ­­ಬಹುದಾದ ಸೌಲಭ್ಯ ಜಾರಿಗೊಳಿಸ­ಲಾಗು­ವುದು. ಅಧಿಕ ಕಾರ್ಯಕ್ಷಮತೆಯ ಸರ್ವರ್‌­ಗಳನ್ನು ಅಳವಡಿಸಿ ಪ್ರತಿ ನಿಮಿಷಕ್ಕೆ 7200 ಇ–ಟಿಕೆಟ್‌­ಗಳನ್ನು ಕೊಡಬಹುದಾದ ಹಾಗೂ ಒಂದೇ ಸಲಕ್ಕೆ 1.2 ಲಕ್ಷ ಜನ ನೋಡಲು ಅನುಕೂಲ­ವಾಗು­ವಂತೆ ವ್ಯವಸ್ಥೆ ಮಾಡಲಾಗುವುದು.

ಈಗ ಪ್ರತಿ ನಿಮಿಷಕ್ಕೆ 2000 ಜನ ಟಿಕೆಟ್‌ ಕಾಯ್ದಿರಿಸಬಹುದು. ಪ್ರಯಾಣಿಕರ ನಿಲುಗಡೆ ಸ್ಥಳ ಬಂದಾಗ ಮುಂಚಿತವಾಗಿಯೇ ಮೊಬೈಲ್‌ಗೆ ಎಸ್‌ಎಂಎಸ್‌ ಕಳುಹಿಸಿ ಎಚ್ಚರಿಸುವ ವ್ಯವಸ್ಥೆಯನ್ನೂ ರೂಢಿಗೆ ತರಲಾಗುವುದು.

ರೈಲ್ವೆ ಆಡಳಿತವನ್ನು ದಕ್ಷಗೊಳಿಸುವ ಉದ್ದೇಶದಿಂದ ರೈಲ್ವೆ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾವ ಬಜೆಟ್‌ನಲ್ಲಿದೆ. ತಾಂತ್ರಿಕ ಮತ್ತು ತಾಂತ್ರಿಕೇತರ ವಿಷಯಗಳಲ್ಲಿ ತರಬೇತಿ ನೀಡುವುದು ಇದರ ಕೆಲಸವಾಗಲಿದೆ.

ಬುಲೆಟ್‌ ರೈಲು: ವೇಗದ ಪ್ರಯಾಣಕ್ಕೆ ಸಂಬಂಧಿಸಿದಂತೆ, ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಗುಜರಾತ್‌ ರಾಜಧಾನಿ ಅಹಮದಾಬಾದ್‌ ನಡುವೆ ಬುಲೆಟ್‌ ರೈಲು ಸಂಚಾರಕ್ಕೆ ಚಾಲನೆ ನೀಡಲಾಗುವುದು. ಉಳಿದಂತೆ, ಆಯ್ದ ಒಂಬತ್ತು ವಲಯಗಳಲ್ಲಿ  ರೈಲುಗಳ ಗರಿಷ್ಠ ವೇಗವನ್ನು ಗಂಟೆಗೆ 160 ಕಿ.ಮೀ.ನಿಂದ 200 ಕಿ.ಮೀ.ಗೆ ಹೆಚ್ಚಿಸಲಾಗುವುದು. ಸೆಪ್ಟೆಂಬರ್‌ ನಂತರ ಎಲ್ಲಾ ಪ್ರಾಯೋಗಿಕ ನಿಲುಗಡೆಗಳನ್ನು ರದ್ದುಪಡಿಸುವ ಉದ್ದೇಶವನ್ನೂ ಸರ್ಕಾರ ಹೊಂದಿದೆ.

ದೇಶದ ನಾಲ್ಕು ಮಹಾನಗರಗಳ ಜತೆ ಅಭಿವೃದ್ಧಿಶೀಲ ನಗರಗಳ ಸಂಪರ್ಕ ಬೆಸೆಯಲು ‘ವಜ್ರ ಚತುರ್ಭುಜ ಹೈ ಸ್ಪೀಡ್‌ ರೈಲ್ವೆ ಜಾಲ’ ನಿರ್ಮಾಣದ ಪ್ರಸ್ತಾವಗಳು ಬಜೆಟ್‌ನಲ್ಲಿ ಸೇರಿವೆ. ಬುಲೆಟ್‌ ರೈಲು ಹಾಗೂ ವಜ್ರ ಚತುರ್ಭುಜ ಯೋಜನೆಗಳಿಗೆ ಚಾಲನೆ ನೀಡಲೆಂದು 100 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ.

‘ವಜ್ರ ಚತುರ್ಭುಜ  ಜಾಲ’ ನಿರ್ಮಿಸಲು 9 ಲಕ್ಷ ಕೋಟಿ ರೂಪಾಯಿಗಳು ಹಾಗೂ ಮುಂಬೈ– ಅಹಮದಾಬಾದ್‌ ಬುಲೈಟ್‌ ರೈಲು ಅನುಷ್ಠಾನಕ್ಕಾಗಿಯೇ 60,000 ಕೋಟಿ ರೂಪಾಯಿ ಹಣ ಬೇಕಾಗುತ್ತದೆ. ‘ಇಷ್ಟು ಹಣವನ್ನು ಕೇವಲ ಪ್ರಯಾಣಿಕರ ಹಾಗೂ ಸರಕು ಸಾಗಣೆ ವೆಚ್ಚ ಹೆಚ್ಚಿಸಿ ಕೂಡಿಸುವುದು ಅಸಾಧ್ಯ. ಹೀಗಾಗಿ ಹಣ ಕ್ರೋಡೀಕರಣಕ್ಕೆ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗುತ್ತದೆ ಎಂದು ಸದಾನಂದ ಗೌಡ ಅವರು ಬಜೆಟ್‌ ಮಂಡನೆ ವೇಳೆ ಮಾಡಿದ ಭಾಷಣದಲ್ಲಿ ಸ್ಪಷ್ಟಪಡಿಸಿದರು.

ರೈಲ್ವೆ ಸಾರ್ವಜನಿಕ ಉದ್ದಿಮೆಗಳ ಹೆಚ್ಚುವರಿ ನಿಧಿಯನ್ನು ಮೂಲಸೌಕರ್ಯ ಕಾಮಗಾರಿಗಳಲ್ಲಿ ತೊಡಗಿಸುವುದಕ್ಕೆ ಅವಕಾಶ ಮಾಡಿಕೊಡುವ ಪ್ರಸ್ತಾವವನ್ನೂ ಬಜೆಟ್‌ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT