ADVERTISEMENT

ಪೂರ್ವ ಕಿನಾರೆಯಲ್ಲಿ ವಾರ್ದಾ ಅಬ್ಬರ

ತಮಿಳುನಾಡಿನಲ್ಲಿ 4 ಸಾವು: ನೂರಾರು ಮರಗಳು ಬುಡಮೇಲು: ಜನಜೀವನ ಅಸ್ತವ್ಯಸ್ತ

ಪಿಟಿಐ
Published 12 ಡಿಸೆಂಬರ್ 2016, 19:30 IST
Last Updated 12 ಡಿಸೆಂಬರ್ 2016, 19:30 IST
ವಾರ್ದಾ ಚಂಡಮಾರುತದಿಂದಾಗಿ ಚೆನ್ನೈನ ರಸ್ತೆಯೊಂದರಲ್ಲಿ ಮರ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು  – ಪಿಟಿಐ ಚಿತ್ರ
ವಾರ್ದಾ ಚಂಡಮಾರುತದಿಂದಾಗಿ ಚೆನ್ನೈನ ರಸ್ತೆಯೊಂದರಲ್ಲಿ ಮರ ಉರುಳಿ ಸಂಚಾರ ಅಸ್ತವ್ಯಸ್ತಗೊಂಡಿತ್ತು – ಪಿಟಿಐ ಚಿತ್ರ   
ಚೆನ್ನೈ: ಭಾರಿ ವೇಗದ ಗಾಳಿ ಮತ್ತು ಮಳೆಯ ಅಬ್ಬರದೊಂದಿಗೆ ವಾರ್ದಾ ಚಂಡಮಾರುತ ತಮಿಳುನಾಡು ಕರಾವಳಿಯಲ್ಲಿ ಚೆನ್ನೈ ಸಮೀಪ ಅಪ್ಪಳಿಸಿದೆ. ವಾರ್ದಾ ಆರ್ಭಟಕ್ಕೆ ನಾಲ್ವರು ಬಲಿಯಾಗಿದ್ದು ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.
 
ತಾಸಿಗೆ ನೂರು ಕಿಲೋಮೀಟರ್‌ಗೂ ಹೆಚ್ಚು ವೇಗದಲ್ಲಿ ಬೀಸುತ್ತಿದ್ದ ಗಾಳಿ ನೂರಾರು ಮರಗಳನ್ನು ಬುಡಮೇಲುಗೊಳಿಸಿದೆ. ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದೆ, ವಿಮಾನ ಸೇವೆಯೂ ಸೇರಿಸಿ ಎಲ್ಲ ಸಂಚಾರ ವ್ಯವಸ್ಥೆ ಸ್ತಬ್ಧವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ
 
ಸೋಮವಾರ ಮಧ್ಯಾಹ್ನ 2.30ರಿಂದ 4.30ರೊಳಗೆ ಚೆನ್ನೈ ಸಮೀಪ ‘ವಾರ್ದಾ’ ಭೂಪ್ರದೇಶವನ್ನು ಪ್ರವೇಶಿಸಿತು. ಆರಂಭದಲ್ಲಿ ಗಾಳಿಯ ವೇಗ ತಾಸಿಗೆ 11ರಿಂದ 120 ಕಿ.ಮೀಗಳಷ್ಟಿತ್ತು. ನಂತರ ವಾರ್ದಾ ವೇಗ 60–70 ಕಿ.ಮೀ.ಗೆ ಇಳಿದಿದೆ. ನಿರೀಕ್ಷೆಯಂತೆಯೇ ಸಂಜೆ 7–8 ಗಂಟೆಯ ಹೊತ್ತಿಗೆ ‘ವಾರ್ದಾ’ ಭೂ ಪ್ರದೇಶವನ್ನು ಹಾದು ಹೋಗಿದೆ. ವಾರ್ದಾ ಪರಿಣಾಮ ತೀವ್ರವಾಗಿದ್ದ ಚೆನ್ನೈ, ತಿರುವಳ್ಳೂರು ಮತ್ತು ಕಾಂಚೀಪುರ ಜಿಲ್ಲೆಗಳ ಜನರಿಗೆ ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿತ್ತು.
**
ರಾಜ್ಯದ ವಿವಿಧೆಡೆ ನಾಳೆಯಿಂದ ಮಳೆ
ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಡಿ.14ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇದೆ.
 
‘ತಮಿಳುನಾಡು ಹಾಗೂ ಆಂಧ್ರದ ಕರಾವಳಿಗೆ ಅಪ್ಪಳಿಸಿರುವ ‘ವಾರ್ದಾ’ ಚಂಡಮಾರುತದಿಂದಾಗಿ ರಾಜ್ಯದ ದಕ್ಷಿಣ ಒಳನಾಡಿನ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ನಿರ್ದೇಶಕ ಸುಂದರ್‌ ಎಂ. ಮೇತ್ರಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
 
‘15ರಂದು ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಹಾಗೂ 16ರಂದು ರಾಜ್ಯದ ಕೆಲವೆಡೆ ಮಳೆಯಾಗಲಿದೆ. 17ರಂದು ಕರಾವಳಿ ಭಾಗದಲ್ಲಿ ಮಾತ್ರ ಸಾಧಾರಣ ಮಳೆಯಾಗಲಿದೆ’ ಎಂದರು. ‘ವಾರ್ದಾ ಚಂಡಮಾರುತದಿಂದಾಗಿ ಬೆಂಗಳೂರು ನಗರದಲ್ಲಿ ಸಾಧಾರಣ ಮಳೆಯಾಗಿದ್ದು, ಮಂಗಳವಾರವೂ  ಮುಂದುವರೆಯಲಿದೆ’ ಎಂದು ಮಾಹಿತಿ ನೀಡಿದರು.
 
**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.