ADVERTISEMENT

ಪೆಟ್ರೋಲ್‌, ಡೀಸೆಲ್‌ ದುಬಾರಿ

ಗ್ರಾಹಕನ ಜೇಬಿಗೆ ಕತ್ತರಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 19:49 IST
Last Updated 28 ಫೆಬ್ರುವರಿ 2015, 19:49 IST

ನವದೆಹಲಿ (ಪಿಟಿಐ): ಫೆಬ್ರುವರಿ ತಿಂಗಳಿನಲ್ಲಿ ತೈಲ ಬೆಲೆಯಲ್ಲಿ ಎರಡನೇ ಬಾರಿಗೆ ಏರಿಕೆಯಾಗಿದ್ದು, ಪೆಟ್ರೋಲ್‌ ಪ್ರತಿ ಲೀಟರ್‌ಗೆ ರೂ. 3.18 ಹಾಗೂ ಡೀಸೆಲ್‌ ರೂ. 3.09ರಷ್ಟು ತುಟ್ಟಿಯಾಗಿದೆ. ಹೊಸ ದರ ಶನಿವಾರ ಮಧ್ಯರಾತ್ರಿ­ಯಿಂದಲೇ ಜಾರಿಗೆ ಬಂದಿದೆ.

ಕಳೆದ ಆಗಸ್ಟ್ ನಿಂದ ಪೆಟ್ರೋಲ್‌ ದರವನ್ನು 10 ಸಲ ಪರಿಷ್ಕರಿಸಿ ಒಟ್ಟಾರೆ  ಲೀಟರ್‌ಗೆ ರೂ. 17.11 ಇಳಿಸಲಾಗಿತ್ತು. ಡೀಸೆಲ್‌ ದರ ಅಕ್ಟೋಬರ್‌ನಿಂದ ಆರು ಬಾರಿ ಇಳಿಕೆಯಾಗಿದ್ದು, ರೂ. 12.96 ರಷ್ಟು ಕಡಿಮೆಯಾಗಿತ್ತು.

‘ಅಂತರರಾಷ್ಟ್ರೀಯ ಮಾರುಕಟ್ಟೆ­ಯಲ್ಲಿ ಕಚ್ಚಾ ತೈಲ ದುಬಾರಿಯಾಗಿದೆ. ರೂಪಾಯಿ–ಡಾಲರ್‌ ವಿನಿಮಯ ದರದ ಬದಲಾ­ವಣೆಯೂ ಇದಕ್ಕೆ ಕಾರಣ’ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌(ಐಒಸಿ) ತಿಳಿಸಿದೆ.

‘ತೈಲ ಬೆಲೆ ಕಡಿಮೆ ಮಾಡುವ ಅವಕಾಶ ಇತ್ತು.  ಆದರೆ ಅಬಕಾರಿ ಸುಂಕ­­ವನ್ನು ಸತತ ನಾಲ್ಕು ಬಾರಿ ಏರಿಸಿದ್ದರಿಂದ ಬೆಲೆ ಹೆಚ್ಚಳ ಅನಿವಾರ್ಯ­ವಾಗಿದೆ’ ಎಂದು ಐಒಸಿ ಮೂಲಗಳು ಹೇಳಿವೆ.

ಗಾಯದ ಮೇಲೆ ಉಪ್ಪು ಸವರಿದಂತೆ: ತೈಲ ಬೆಲೆ ಏರಿಕೆಗೆ ತೀಕ್ಷ್ಣವಾಗಿ ಪ್ರತಿ­ಕ್ರಿಯಿಸಿ­ರುವ ಕಾಂಗ್ರೆಸ್‌ ಪಕ್ಷ, ಬಜೆಟ್‌­ನಲ್ಲಿನ ಏರಿಕೆಯ ಜತೆಗೆ ಜನಸಾಮಾನ್ಯರ ಗಾಯದ ಮೇಲೆ ಉಪ್ಪು ಸವರಿದಂತೆ ಆಗಿದೆ ಎಂದು ಟೀಕಿಸಿದೆ.

ಪೆಟ್ರೋಲ್‌ , ಡೀಸೆಲ್‌ ದುಬಾರಿ: ಗ್ರಾಹಕನ ಜೇಬಿಗೆ ಕತ್ತರಿ
ಬೆಂಗಳೂರು:
ನಗರದಲ್ಲಿ ಶನಿವಾರ ಮಧ್ಯ­ರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್‌ ದರದಲ್ಲಿ ಪ್ರತಿ ಲೀಟರ್‌ಗೆ ರೂ. 3.37 ಮತ್ತು ಡೀಸೆಲ್‌ ದರ ರೂ. 3.34 ಏರಿಕೆ­ಯಾಗಿದೆ. ನಗರದ ಒಳಭಾಗದ ಬಂಕ್‌ಗಳಲ್ಲಿ ಈ ಹಿಂದೆ ಪೆಟ್ರೋಲ್‌ ದರ ಲೀಟರ್‌ಗೆ ರೂ. 62.81 ಇತ್ತು. ಇದೀಗ ಬೆಲೆ ಏರಿಕೆಯಿಂದ ಪರಿಷ್ಕೃತ ದರ ರೂ.   66.18 ಆಗಿದೆ.

ನಗರದ ಹೊರಭಾಗದ ಬಂಕ್‌­ಗಳಲ್ಲಿ ರೂ. 62.26 ಇದ್ದ ಪೆಟ್ರೋಲ್‌ ಬೆಲೆ ಇದೀಗ ರೂ. 65.63ಕ್ಕೆ ಏರಿಕೆಯಾಗಿದೆ. ಅದೇ ರೀತಿ ನಗರದ ಒಳಭಾಗದ ಬಂಕ್‌ಗಳಲ್ಲಿ ಪ್ರತಿ ಲೀಟರ್‌ಗೆ ರೂ. 50.72 ಇದ್ದ ಡೀಸೆಲ್‌ ದರ ಈಗ ರೂ. 54.06ಕ್ಕೆ ಏರಿಕೆಯಾಗಿದೆ. ಹೊರ­ಭಾಗದ ಬಂಕ್‌ಗಳಲ್ಲಿ ರೂ. 50.67 ಇದ್ದ ಡೀಸೆಲ್‌ ಬೆಲೆ ಇದೀಗ ರೂ. 54.01 ಆಗಿದೆ.

ಆಟೊ ಎಲ್‌ಪಿಜಿ ದರ ಪ್ರತಿ ಲೀಟರ್‌ಗೆ ರೂ. 1.91 ಹೆಚ್ಚಳವಾಗಿದೆ. ಈ ಹಿಂದೆ ರೂ. 37.69 ಇದ್ದ ಆಟೊ ಎಲ್‌ಪಿಜಿ ದರ ಈಗ ರೂ. 39.60 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT