ADVERTISEMENT

ಪ್ರಜ್ಞಾಗೆ ಜಾಮೀನು ಪುರೋಹಿತ್‌ಗೆ ಇಲ್ಲ

ಪಿಟಿಐ
Published 25 ಏಪ್ರಿಲ್ 2017, 19:46 IST
Last Updated 25 ಏಪ್ರಿಲ್ 2017, 19:46 IST
ಪ್ರಸಾದ್ ಪುರೋಹಿತ್
ಪ್ರಸಾದ್ ಪುರೋಹಿತ್   

ಮುಂಬೈ: ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಎಂಟಕ್ಕೂ ಹೆಚ್ಚು ವರ್ಷಗಳಿಂದ ಜೈಲಿನಲ್ಲಿರುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ.

‘ಸಾಧ್ವಿ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ’ ಎಂದು ಕೋರ್ಟ್‌ ಹೇಳಿದೆ.

ಪ್ರಕರಣದ ಸಹ–ಆರೋಪಿ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಅವರಿಗೆ ಜಾಮೀನು ನಿರಾಕರಿಸಿದೆ. ಪುರೋಹಿತ್ ಮೇಲಿನ ಆರೋಪಗಳು ‘ಗಂಭೀರ ಸ್ವರೂಪದ್ದು’ ಎಂದು ಹೇಳಿದೆ.

ADVERTISEMENT

ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

‘ಕೊನೆಗೂ ನಾವು ಜಯ ಸಾಧಿಸಿದ್ದೇವೆ. ದೇಶದ ಎಲ್ಲೆಡೆ ಸಂಭ್ರಮ ಆಚರಿಸಲಿದ್ದೇವೆ...’

ಮಾಲೇಗಾಂವ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಅವರಿಗೆ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದ ನಂತರ, ಅವರ ಸಂಬಂಧಿ ಭಗವಾನ್ ಝಾ ಆಡಿದ ಮಾತು ಇದು.

ಸಾಕ್ಷ್ಯವೇ ಇಲ್ಲದಿದ್ದರೂ ಪ್ರಜ್ಞಾ ಅವರು ಒಂಬತ್ತು ವರ್ಷ ಜೈಲುವಾಸ ಅನುಭವಿಸುವಂತಾಯಿತು ಎಂದು ಭಗವಾನ್ ಸುದ್ದಿಗಾರರ ಬಳಿ ಬೇಸರ ವ್ಯಕ್ತಪಡಿಸಿದರು.

ಜಾಮೀನು ಆದೇಶ ಸ್ವಾಗತಿಸಿ ಭಗವಾನ್ ಅವರು, ಕೋರ್ಟ್‌ ಆವರಣದ ಹೊರಗೆ ಸಿಹಿ ಹಂಚಿದರು.

ದ್ವಿಚಕ್ರ ವಾಹನದ ಉಲ್ಲೇಖ: ಸ್ಫೋಟಕ್ಕೆ ಬಳಸಿಕೊಂಡ ದ್ವಿಚಕ್ರ ವಾಹನವು ಪ್ರಜ್ಞಾ ಹೆಸರಿನಲ್ಲಿ ನೋಂದಣಿಯಾಗಿದ್ದರೂ, ಆ ವಾಹನವು ಇನ್ನೊಬ್ಬ ಆರೋಪಿ ರಾಮ್‌ಜಿ ಕಲ್ಸಂಗ್ರಾ ಎನ್ನುವವರ ಬಳಿ ಸ್ಫೋಟಕ್ಕೆ ಎರಡು ವರ್ಷ ಮೊದಲಿನಿಂದ ಇತ್ತು ಎಂದು ಬಾಂಬೆ ಹೈಕೋರ್ಟ್‌, ಜಾಮೀನು ಆದೇಶದಲ್ಲಿ ಹೇಳಿದೆ. ರಾಮ್‌ಜಿ ತಲೆಮರೆಸಿಕೊಂಡಿದ್ದಾರೆ.

‘ಪ್ರಜ್ಞಾ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿರುವುದರಿಂದ ಅವರಿಗೆ ಜಾಮೀನು ತಡೆಹಿಡಿಯಲು ಆಗದು’ ಎಂದು ನ್ಯಾಯಮೂರ್ತಿಗಳಾದ ರಂಜಿತ್ ಮೋರೆ ಹಾಗೂ ಶಾಲಿನಿ ಫನ್ಸಾಲ್ಕರ್ ಜೋಶಿ ಅವರಿದ್ದ ಪೀಠ ಹೇಳಿದೆ.

‘ಬಾಂಬ್‌ ಸ್ಫೋಟದ ಸಂಚು ರೂಪುಗೊಂಡಿತು ಎನ್ನಲಾದ ಭೋಪಾಲ್‌ನಲ್ಲಿನ ಸಭೆಯಲ್ಲಿ ಪಾಲ್ಗೊಂಡಿದ್ದಾಗಿ ಕೆಲವರು ಎಟಿಎಸ್‌ ಬಳಿ ಸಾಕ್ಷಿ ಹೇಳಿದ್ದರೂ, ಕೊನೆಯಲ್ಲಿ ತಮ್ಮ ಹೇಳಿಕೆಗಳಿಂದ ಹಿಂದೆ ಸರಿದರು’ ಎಂದು ಆದೇಶದಲ್ಲಿ ಹೇಳಲಾಗಿದೆ.

ಸುಳ್ಳು ಹೇಳಿಕೆ ನೀಡುವಂತೆ ತಮ್ಮನ್ನು ಎಟಿಎಸ್‌ ಅಧಿಕಾರಿಗಳು ಹಿಂಸಿಸಿದ್ದರು ಎಂದು ನಂತರ ಅವರು ಆರೋಪಿಸಿದ್ದರು.

‘ಪುರೋಹಿತ್ ವಿರುದ್ಧ ಆಧಾರಗಳಿವೆ’

‘ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್‌ ವಿರುದ್ಧದ ಆರೋಪಗಳು ಸತ್ಯವೆನ್ನಲು ಕಾರಣಗಳು ಇವೆ. ಈ ಬಗ್ಗೆ ಮೇಲ್ನೋಟಕ್ಕೆ ಸಾಕಷ್ಟು ಆಧಾರಗಳಿವೆ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.

‘ಬಾಂಬ್‌ ಸ್ಫೋಟದಂತಹ ಹಿಂಸಾತ್ಮಕ ಮಾರ್ಗ ಅನುಸರಿಸಿ ಜನರ ಮನಸ್ಸಿನಲ್ಲಿ ಭೀತಿ ಸೃಷ್ಟಿಸುವ, ದೇಶದ ಸಮಗ್ರತೆ ಹಾಗೂ ಏಕತೆಯ ವಿರುದ್ಧ ಸಮರ ಸಾರಿದ ಆರೋಪ ಪುರೋಹಿತ್ ಮೇಲಿದೆ’ ಎಂದು ಕೋರ್ಟ್‌, ಅವರಿಗೆ ಜಾಮೀನು ನಿರಾಕರಿಸಿದ ಆದೇಶದಲ್ಲಿ ಹೇಳಿದೆ.

ಎನ್‌ಐಎ ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಉಲ್ಲೇಖಿಸಿರುವ ಆದೇಶವು, ‘ಹಿಂದೂ ರಾಷ್ಟ್ರಕ್ಕೆ ಪುರೋಹಿತ್ ಅವರು ಪ್ರತ್ಯೇಕ ಸಂವಿಧಾನ ಹಾಗೂ ಕೇಸರಿ ಧ್ವಜ ಸಿದ್ಧಪಡಿಸಿದ್ದರು. ಹಿಂದೂಗಳ ಮೇಲೆ ಮುಸ್ಲಿಮರು ನಡೆಸಿದ ದೌರ್ಜನ್ಯಕ್ಕೆ ಪ್ರತೀಕಾರ ಕ್ರಮ ಕೈಗೊಳ್ಳುವ ಬಗ್ಗೆಯೂ ಅವರು ಚರ್ಚಿಸಿದ್ದರು’ ಎಂದು ಹೇಳಿದೆ.

ಅಭಿನವ ಭಾರತ ಸಂಘಟನೆಯ ಸಭೆಗಳಿಗೆ ತಾವು ‘ಮಿಲಿಟರಿ ಗೂಢಚರ್ಯೆಯ ಭಾಗವಾಗಿ’ ಹೋಗುತ್ತಿದ್ದುದಾಗಿ ಪುರೋಹಿತ್ ಹೇಳಿದ್ದನ್ನು ಕೋರ್ಟ್‌ ಒಪ್ಪಿಲ್ಲ.

‘ಅಭಿನವ ಭಾರತ ಸಂಘಟನೆಯು ರಾಜಕೀಯ ಪಕ್ಷವಾಗಷ್ಟೇ ಇರಬಾರದು. ತೀವ್ರಗಾಮಿಗಳ ಸಂಘಟನೆ ಆಗಬೇಕು, ತನ್ನನ್ನು ವಿರೋಧಿಸುವವರನ್ನು ಇಲ್ಲವಾಗಿಸುವ ಶಕ್ತಿ ಅದಕ್ಕೆ ಬರಬೇಕು ಎಂದು ಪುರೋಹಿತ್ ಹೇಳಿದ್ದರು’ ಎಂದು ಸಾಕ್ಷಿಯೊಬ್ಬರು ಹೇಳಿದ್ದನ್ನೂ ಆದೇಶದಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.