ADVERTISEMENT

ಪ್ರಣವ್‌ ಮೇಷ್ಟ್ರ ಪಾಠ 

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 19:41 IST
Last Updated 4 ಸೆಪ್ಟೆಂಬರ್ 2015, 19:41 IST

ನವದೆಹಲಿ (ಪಿಟಿಐ): ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಶುಕ್ರವಾರ ತಮ್ಮ ಬಾಲ್ಯ ಮತ್ತು ತಾಯಿಯನ್ನು ಸ್ಮರಿಸಿಕೊಂಡು ಕ್ಷಣಕಾಲ ಬಾವುಕರಾದ ಘಟನೆ ನಡೆಯಿತು.

‘ಬಾಲ್ಯದಲ್ಲಿ ಅತ್ಯಂತ ತುಂಟನಾಗಿದ್ದ ನನ್ನನ್ನು ತಿದ್ದಿ, ತೀಡಿ ಒಬ್ಬ ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ಬೆಳೆಸಿದ ತಾಯಿಯೇ ನನ್ನ ಮೊದಲ ಗುರು. ಇಂದು ನಾನು  ಏನಾಗಿದ್ದೇನೆಯೋ ಅದೆಲ್ಲವೂ ಆ ಆಕೆಯಿಂದ.  ನನ್ನ ಯಶಸ್ಸು ನನ್ನ ತಾಯಿಗೆ ಸಲ್ಲಬೇಕು’ ಎಂದು ಅವರು ಭಾವುಕರಾಗಿ ನುಡಿದರು.

ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜೇಂದ್ರ ಪ್ರಸಾದ್‌ ಸರ್ವೋದಯ ವಿದ್ಯಾಲಯದ ವಿದ್ಯಾರ್ಥಿಗಳನದ್ದೇಶಿಸಿ ಅವರು ಮಾತನಾಡಿದರು.

‘ರಾಷ್ಟ್ರಪತಿ ಅಲ್ಲ, ಮುಖರ್ಜಿ ಸರ್‌’: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ  ಒಂದು ತಾಸು ವಿದ್ಯಾರ್ಥಿಗಳಿಗೆ ‘ಭಾರತದ ರಾಜಕೀಯ ಇತಿಹಾಸ’ ಬಗ್ಗೆ ಪಾಠ ಮಾಡುವ ಮೂಲಕ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಅನುಕರಿಸಿದರು.

‘ನಾನು ಇಂದು ರಾಷ್ಟ್ರಪತಿ ಅಲ್ಲ. ನಿಮ್ಮೆಲ್ಲರ ಪ್ರೀತಿಯ ಮುಖರ್ಜಿ ಮೇಸ್ಟ್ರು ಅಷ್ಟೇ. ನಿಮಗೆ ನನ್ನ ಪಾಠ ಬೇಜಾರಾದರೆ ಯಾವುದೇ ಮುಲಾಜಿಲ್ಲದೇ ಹೇಳಿ’ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಬದಲಾಗುತ್ತಿರುವ ಭಾರತ ಮತ್ತು ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣ, ಮಾಧ್ಯಮ, ಸ್ವಯಂ ಸೇವಾ ಸಂಸ್ಥೆಗಳ  ಮಹತ್ವ ಕುರಿತು ಉಪನ್ಯಾಸ ನೀಡಿದರು.

ಮೋದಿ ಕಿವಿಮಾತು: ಪೋಷಕರು ತಮ್ಮ ಆಸೆ, ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರಬಾರದು. ಅವರ ಇಷ್ಟದ ಕ್ಷೇತ್ರಗಳ ಆಯ್ಕೆಯನ್ನು ಅವರಿಗೆ ಬಿಟ್ಟುಬಿಡಿ. ಅಂದಾಗ ಮಾತ್ರ ಅವರಿಂದ ಉತ್ತಮ ಸಾಧನೆ ಸಾಧ್ಯ ಎಂದು ಮೋದಿ ಪೋಷಕರಿಗೆ ಕಿವಿಮಾತು ಹೇಳಿದರು.

ವಿವಿಧ ಕ್ಷೇತ್ರಗಳ ತಜ್ಞರು, ಪ್ರತಿಭಾವಂತರು, ಸಾಧಕರು ವಾರಕ್ಕೆ ಒಂದು ತಾಸು ಅಥವಾ ವರ್ಷಕ್ಕೆ ನೂರು ತಾಸು ಮಕ್ಕಳಿಗೆ ಕಲಿಸಲು ಮೀಸಲಿಡಬೇಕು. ಹೊಸ ಆಲೋಚನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತಬೇಕು ಎಂದರು.
ಶಿಕ್ಷಕರ ದಿನಾಚರಣೆಯ ಮುನ್ನಾದಿನ ದೆಹಲಿಯ ವಿವಿಧ ಶಾಲೆಗಳ 800 ವಿದ್ಯಾರ್ಥಿಗಳು ಮತ್ತು 60 ಶಿಕ್ಷಕರನ್ನು ಉದ್ದೇಶಿಸಿ ಸುಮಾರು ಒಂದೂ ಮುಕ್ಕಾಲು ತಾಸು ಅವರು ಮಾತನಾಡಿದರು. ಇದೇ ವೇಳೆ ವೀಡಿಯೊ ಕಾನ್ಫರೆನ್ಸ್‌ ಮೂಲಕ 9 ರಾಜ್ಯಗಳ ವಿದ್ಯಾರ್ಥಿಗಳ  ಜತೆ  ಸಂವಾದ ನಡೆಸಿದರು. 

‘2022ರ ವೇಳೆಗೆ ದೇಶ 75ನೇ ಸ್ವಾತಂತ್ರೋತ್ಸವ ಆಚರಿಸಿಕೊಳ್ಳುವ ಶುಭ  ಸಂದರ್ಭದಲ್ಲಿ ದೇಶದ ಯಾವ ಮನೆಯಲ್ಲೂ ಕತ್ತಲೆ ಇರಬಾರದು. ಪ್ರತಿ ಮನೆಯೂ ವಿದ್ಯುತ್‌ ದೀಪದಿಂದ ಬೆಳಗಬೇಕು ಎನ್ನುವುದು ನನ್ನ ಸಂಕಲ್ಪ ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.