ADVERTISEMENT

ಪ್ರಯಾಣ ದರ ಏರಿಕೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 19:30 IST
Last Updated 8 ಜುಲೈ 2014, 19:30 IST

ನವದೆಹಲಿ (ಪಿಟಿಐ): ಇಂಧನ ಹೊಂದಾಣಿಕೆಯ ಪಾಲಿಗೆ (ಎಫ್‌ಎಸಿ) ತಕ್ಕಂತೆ ಪ್ರತಿ ಆರು ತಿಂಗಳಿಗೊಮ್ಮೆ ರೈಲು ಪ್ರಯಾಣ ದರ ಏರಿಕೆ ಮುಂದು­­ವರಿಯಲಿದೆ ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಮಂಗಳವಾರ ಹೇಳಿದರು.

ಚೊಚ್ಚಲ ಬಜೆಟ್‌ ಮಂಡನೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ಸಂಪನ್ಮೂಲದ ಕೊರ­ತೆಯ ಕಾರಣ ಹೆಚ್ಚಿನ ಸಂಖ್ಯೆ ಯೋಜ­ನೆ­ಗಳು ಪೂರ್ಣ­ಗೊಂಡಿಲ್ಲ. ಈ  ಮುಗ್ಗಟ್ಟಿ­ನಿಂದ ಹೊರ­ಬರಲು ಖಾಸಗಿ ಮತ್ತು ವಿದೇಶಿ ಬಂಡ­ವಾಳ ಹೂಡಿಕೆ­ಯನ್ನು ಆಕರ್ಷಿಸುವ ಪ್ರಸ್ತಾವ ಮಾಡಲಾಗಿದೆ’ ಎಂದರು.

ಎಫ್‌ಡಿಐ ಆಕರ್ಷಣೆ ಯನ್ನು  ಸಮ­ರ್ಥಿ­ಸಿಕೊಂಡ ರೈಲ್ವೆ ಸಚಿವರು, ‘ಬುಲೆಟ್‌ ರೈಲುಗಳ ಸಂಚಾರ ಆರಂಭಿ­ಸ­ಬೇಕಿದ್ದರೆ ದೊಡ್ಡ ಮಟ್ಟದ ಬಂಡ­ವಾಳ ಹೂಡಿಕೆ ಅಗತ್ಯ ಇದೆ. ಆದರೆ, ರೈಲ್ವೆಯಲ್ಲಿ ಎಫ್‌ಡಿಐ ನಿರ್ಬಂಧಿಸ­ಲಾಗಿದೆ. ಇದನ್ನು ತೆರವುಗೊಳಿಸಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆ­ಗಳಲ್ಲಿ ಎಫ್‌ಡಿಐಗೆ ಅನುವು ಮಾಡಿ­ಕೊಡು­ವಂತೆ  ವಾಣಿಜ್ಯ ಸಚಿವಾಲಯ­ವನ್ನು ಕೋರಲಾ­ಗುವುದು’ ಎಂದರು.

‘ಪ್ರಮುಖ ಕಾರ್ಯನಿರ್ವಹಣಾ ವಲಯಗಳಲ್ಲಿ ಎಫ್‌ಡಿಐ ಆಕರ್ಷಣೆ ಇರುವುದಿಲ್ಲ’ ಎಂದು ಸ್ಪಷ್ಟ ಪಡಿಸಿದರು.
ಎಫ್‌ಡಿಐ ಆಕರ್ಷಿಸುವುದಾದರೆ ಅದಕ್ಕೆ ಏನಾದರೂ ನಿರ್ಬಂಧಗಳು ಇರುತ್ತವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆದ ಸರ್ಕಾರ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ರೈಲ್ವೆ ಯೋಜನೆ ಗಳಲ್ಲಿ ಹೂಡಿಕೆ ಮಾಡಲು ಖಾಸಗಿ ವಲಯದವರಲ್ಲಿ ಹಿಂಜರಿಕೆ ಇದೆ. ರೈಲ್ವೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿಫಲ ದೊರೆಯುವು­ದಿಲ್ಲ ಎನ್ನುವ ನಂಬಕೆ ಅವರಲ್ಲಿ ಇದ್ದಂತೆ ಕಾಣುತ್ತದೆ. ಆದ್ದರಿಂದ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ನೀತಿಯಲ್ಲಿ ಬದಲಾವಣೆ ತರುವ ಮೂಲಕ ಖಾಸಗಿ ವಲಯದ ಹೂಡಿಕೆದಾರರನ್ನು ಆಕರ್ಷಿಸುವ ಅಗತ್ಯ ಇದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರೈಲು ದರ ಪ್ರಾಧಿಕಾರ (ಆರ್‌ಟಿಎ) ರಚಿಸುವ ಉದ್ದೇಶ ಏನಾದಾರೂ ಇದೆಯೇ ಎಂಬ ಪ್ರಶ್ನೆಗೆ ‘ಈ ಬಗ್ಗೆ ಪರಿಶೀಲಿಸಿ, ಅಧ್ಯಯನ ನಡೆಸಲಾಗುವುದು’ ಎಂದು ಚುಟುಕಾಗಿ ಉತ್ತರಿಸಿದರು. ಯುಪಿಎ ಸರ್ಕಾರದ ಬಜೆಟ್‌ನಲ್ಲಿ ಆರ್‌ಟಿಎ ಪ್ರಸ್ತಾವ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.