ADVERTISEMENT

ಪ್ರವೇಶ: ಎಂಸಿಐ,ಡಿಸಿಐಗೆ ಸುಪ್ರೀಂಕೋರ್ಟ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ನವದೆಹಲಿ: ವೈದ್ಯಕೀಯ ಕಾಲೇಜುಗಳಲ್ಲಿನ  ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಆದೇಶ ಉಲ್ಲಂಘಿಸಿದ್ದಕ್ಕಾಗಿ  ಸುಪ್ರೀಂಕೋರ್ಟ್‌,  ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಸೇರಿದಂತೆ ಇತರ ನಿಯಂತ್ರಣ ಮಂಡಳಿಗಳಿಗೆ ಛೀಮಾರಿ ಹಾಕಿದೆ.

ಅಲ್ಲದೇ ಈ ವಿಚಾರದಲ್ಲಿ ಮತ್ತೊಮ್ಮೆ ನ್ಯಾಯಾಲಯದ ಹಾದಿ ತಪ್ಪಿಸಲು ಯತ್ನಿಸಿದಲ್ಲಿ ನಿಯಂತ್ರಣ ಮಂಡಳಿಗಳ ವಿರುದ್ಧ  ನ್ಯಾಯಾಂಗ ನಿಂದನೆ ಪ್ರಕ್ರಿಯೆ ಇಲ್ಲವೇ ಸಿಬಿಐ ತನಿಖೆಗೆ ಆದೇಶಿಸುವುದಾಗಿ ಎಚ್ಚರಿಸಿದೆ.

ಮದುರೆ ಮೂಲದ ಬೆಸ್ಟ್‌ ದಂತವೈದ್ಯ ಕಾಲೇಜು ಹಾಗೂ ಮತ್ತಿತರ ಕಾಲೇಜುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ.ವೈ. ಇಕ್ಬಾಲ್‌ ಹಾಗೂ ಸಿ. ನಾಗಪ್ಪನ್‌ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ನಿಯಂತ್ರಣ ಮಂಡಳಿಗಳ ಪರವಾಗಿ ಹಾಜರಾದ ವಕೀಲರು ನೀಡಿದ ಹೇಳಿಕೆ ಹಾಗೂ ಅವರು ನೀಡಿರುವ ದಾಖಲೆಗಳಲ್ಲಿ ವ್ಯತ್ಯಾಸ ಇರುವ ಕಾರಣ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

2006ರಲ್ಲಿ ಸ್ಥಾಪಿಸಲಾಗಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ನವೀಕರಿಸಬೇಕಾದರೆ ‘ಭಾರತೀಯ ದಂತವೈದ್ಯ ಮಂಡಳಿ’, ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದ ಆದೇಶಗಳನ್ನು ಧಿಕ್ಕರಿಸಿದೆ ಎಂದ ಕೋರ್ಟ್‌, ಇದೊಂದು ಅಪರೂಪದ ಪ್ರಕರಣವಾಗಿದೆ ಎಂದು ಹೇಳಿತು.

ಪ್ರವೇಶ ಅನುಮತಿ ನವೀಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳಲ್ಲಿ ‘ಎಂಸಿಐ’, ‘ಡಿಸಿಐ’ ಹಾಗೂ ‘ವಿಸಿಐ’ಗಳು ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಆದೇಶಗಳನ್ನು ಪಾಲಿಸುತ್ತಿಲ್ಲ ಎಂಬುದನ್ನು ನಾವು ಗಮನಿಸಿದ್ದೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.