ADVERTISEMENT

ಫಡ್ನವೀಸ್‌ ಸರ್ಕಾರಕ್ಕೆ ಸೇನೆ ನೀತಿ ಪಾಠ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2014, 6:40 IST
Last Updated 1 ನವೆಂಬರ್ 2014, 6:40 IST

ಮುಂಬೈ (ಪಿಟಿಐ): ಮಹಾರಾಷ್ಟ್ರದಲ್ಲಿ  ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಗೆ, ಶಿವಸೇನೆ ಶುಭಕೋರಿದೆ. ಬೆನ್ನಲ್ಲೆ, ಬಿಜೆಪಿಯ ಮೊದಲ  ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ರಾಜ್ಯದ ಸಾಮಾನ್ಯ ಜನರ ನಿರೀಕ್ಷೆಗಳನ್ನು ಹುಸಿಗೊಳಿಸ­ಬಾರದು ಎಂದೂ ತಾಕೀತು ಮಾಡಿದೆ.

‘ಹೊಸ ಸರ್ಕಾರ ಎಂದರೆ  ಮದುವೆಯಾಗಿ ಅತ್ತೆ ಮನೆಗೆ ಬಂದ ನವ ವಧುವಿನಂತೆ. ಇಲ್ಲಿ ಮುಖ್ಯಮಂತ್ರಿ ಫಡ್ನವೀಸ್‌ ಅವರು ನವ ವಧು ಇದ್ದಂತೆ. ರಾಜ್ಯದ ಜನತೆ ಅತ್ತೆಯ ಸ್ಥಾನದಲ್ಲಿದ್ದಾರೆ. ತಪ್ಪು ಮಾಡಿದರೆ ತಿದ್ದಿ ಹೇಳುವ ಅಧಿಕಾರ  ಅತ್ತೆಗಿದೆ. ಫಡ್ನವೀಸ್‌ ಅವರು ಜನತೆಯ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು’ ಎಂದು ಶಿವಸೇನೆ ನೀತಿ  ಪಾಠ ಹೇಳಿದೆ. ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಈ ಕುರಿತು ಸಂಪಾದಕೀಯವನ್ನೂ ಬರೆದಿದೆ.

ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ರಾಜ್ಯದ ಜನತೆಯ ನಿರೀಕ್ಷೆ ಸಹಜವಾಗಿಯೇ ಹೆಚ್ಚಿದೆ. ಆದರೆ, ಎಲ್ಲರ ನಿರೀಕ್ಷೆಗಳನ್ನು ದಿಢೀರನೆ ನನಸು ಮಾಡುವಂತಹ ಯಾವುದೇ ಮಂತ್ರದಂಡ ಸರ್ಕಾರದ ಕೈಯಲ್ಲಿ  ಇಲ್ಲ. ಹಂತ ಹಂತವಾಗಿ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂದು ಸೇನೆ ಹೇಳಿದೆ.

ಫಡ್ನವೀಸ್‌ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾರ್ಪೊರೇಟ್‌ ಪ್ರಮುಖರು ಭಾಗವಹಿಸಿದ್ದರು. ಇದನ್ನು ಪರೋಕ್ಷವಾಗಿ ಟೀಕಿಸಿರುವ ಸೇನೆ, ಶಿವಾಜಿ ಮಹಾರಾಜರ ಕಾಲದಲ್ಲಿ ಮಹಾರಾಷ್ಟ್ರದಲ್ಲಿ  ಬಡವರಿಗೂ ಶ್ರೀಮಂತರಿಗೂ ಸಮಾನ ಸ್ಥಾನಮಾನ ಇತ್ತು. ಹೊಸ ಸರ್ಕಾರ ಕೇವಲ ಹೂಡಿಕೆದಾರರಿಗೆ ಮಾತ್ರ ರತ್ನಗಂಬಳಿ ಹಾಸದೆ, ಶ್ರೀಸಾಮಾನ್ಯನ ಹಿತಾಸಕ್ತಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT