ಮುಂಬೈ (ಪಿಟಿಐ): ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಶನಿವಾರ ಚುನಾವಣಾ ಆಯೋಗದ ಅಧಿಸೂಚನೆ ಹೊರಬಿದ್ದಿದ್ದರೂ ಮೈತ್ರಿಕೂಟಗಳಾದ ಶಿವಸೇನೆ– ಬಿಜೆಪಿ ಹಾಗೂ ಕಾಂಗ್ರೆಸ್– ಎನ್ಸಿಪಿಗಳ ನಡುವೆ ಕ್ಷೇತ್ರ ಹೊಂದಾಣಿಕೆ ಹಗ್ಗಜಗ್ಗಾಟ ಇನ್ನೂ ಮುಂದುವರೆದಿದೆ.
ಎರಡು– ಮೂರು ದಿನಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಎನ್ಸಿಪಿ ಜತೆ ಮೈತ್ರಿ ಕೊನೆಗೊಳಿಸುವ ಎಚ್ಚರಿಕೆಯನ್ನು ಕಾಂಗ್ರೆಸ್ ಶನಿವಾರ ನೀಡಿದೆ.
ಮತ್ತೊಂದೆಡೆ ಯಾವುದೇ ಕಾರಣಕ್ಕೂ ಕ್ಷೇತ್ರ ಹೊಂದಾಣಿಕೆಯಂತಹ ಕ್ಷುಲ್ಲಕ ಕಾರಣಕ್ಕೆ ಶಿವಸೇನೆ ಜತೆ 25 ವರ್ಷಗಳ ಮೈತ್ರಿ ಕಡಿದುಕೊಳ್ಳದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಾಕೀತು ಮಾಡಿದ್ದಾರೆ.
ಬಿಜೆಪಿ ಬಿಗಿಪಟ್ಟು ಸಡಿಲಿಸಿದ ಕಾರಣ ಸ್ಥಾನ ಹೊಂದಾಣಿಕೆ ಬಿಕ್ಕಟ್ಟು ಶನಿವಾರ ಕೊನೆಗಾಣಬಹುದು ಎಂದು ಭಾವಿಸಲಾಗಿತ್ತು. ಆದರೆ, ಎರಡೂ ಪಕ್ಷಗಳ ನಾಯಕರ ಸಭೆ ಒಮ್ಮತಕ್ಕೆ ಬರಲು ವಿಫಲವಾಗಿದೆ. ಈ ಮಧ್ಯೆ ಸ್ಥಾನ ಹೊಂದಾಣಿಕೆ ಬಿಕ್ಕಟ್ಟು ಬಗೆಹರಿಸಲು ಇನ್ನೂ ಎರಡು ಸುತ್ತಿನ ಮಾತುಕತೆ ನಡೆಸಲು ಬಿಜೆಪಿ ನಿರ್ಧರಿಸಿದೆ.
ಭಾನುವಾರ ನಡೆಯುವ ಶಿವಸೇನಾ ಕಾರ್ಯಕಾರಿಣಿಯಲ್ಲಿ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬಿಜೆಪಿ ಜತೆ ಮೈತ್ರಿ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಹಾಗೂ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ. 288 ವಿಧಾನಸಭಾ ಕ್ಷೇತ್ರಗಳಲ್ಲಿ ತನಗೆ 155 ಸ್ಥಾನಗಳನ್ನು ಇಟ್ಟುಕೊಂಡು ಬಿಜೆಪಿಗೆ 125 ಕ್ಷೇತ್ರ ಬಿಟ್ಟು ಕೊಡುವ ಸೂತ್ರವನ್ನು ಬಿಜೆಪಿ ಮುಂದಿಟ್ಟಿದೆ. ಶಿವಸೇನೆಯ ಸೂತ್ರವನ್ನು ಬಿಜೆಪಿತಳ್ಳಿಹಾಕಿದೆ. ಇದೇ ವೇಳೆ, ಮುಂದಿನ 24 ಗಂಟೆಯೊಳಗೆ ಸ್ಥಾನ ಹೊಂದಾಣಿಕೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ನಾಯಕ ವಿನೋದ್ ತಾವಡೆ ಹೇಳಿದ್ದಾರೆ.
ಕಾಂಗ್ರೆಸ್ ಬೆದರಿಕೆ: ಇನ್ನೂ ಎರಡು ಅಥವಾ ಮೂರು ದಿನಗಳಲ್ಲಿ ಎನ್ಸಿಪಿಯಿಂದ ಪೂರಕ ಪ್ರತಿಕ್ರಿಯೆ ದೊರೆಯದಿದ್ದಲ್ಲಿ ಎಲ್ಲಾ 288 ಸ್ಥಾನಗಳಲ್ಲೂ ಸ್ಪರ್ಧಿಸಲು ಸಜ್ಜಾಗಿರುವುದಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ ರಾವ್ ಠಾಕ್ರೆ ತಿಳಿಸಿದ್ದಾರೆ.
ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಬಳಿಕ ಈ ವಿಷಯ ತಿಳಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಿದ್ದ 174 ಕ್ಷೇತ್ರಗಳ ಸಂಭಾವ್ಯ ಹುರಿಯಾಳುಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು ಎಂದರು.
ಎನ್ಸಿಪಿಗೆ 126 ಕ್ಷೇತ್ರ ಬಿಟ್ಟು ಕೊಡುವ ಪ್ರಸ್ತಾವವನ್ನು ಕಾಂಗ್ರೆಸ್ ಮುಂದಿಟ್ಟಿದೆ. ಆದರೆ, ಎನ್ಸಿಪಿ ಪ್ರತಿಕ್ರಿಯಿಸಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲ 144 ಸ್ಥಾನಗಳನ್ನು ಬಿಟ್ಟುಕೊಡುವಂತೆ ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಟ್ಟು ಹಿಡಿದಿದೆ.
ಒಂದು ವೇಳೆ ಎನ್ಸಿಪಿ ಬಿಗಿಪಟ್ಟು ಸಡಿಲಿಸದಿದ್ದರೆ ಏಕಾಂಗಿಯಾಗಿ ಚುನಾವಣೆ ಎದುರಿಸುವುದಾಗಿ ಕಾಂಗ್ರೆಸ್ ಹೇಳಿದೆ.
ಅ.15ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 27 ಕೊನೆಯ ದಿನವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.