ADVERTISEMENT

ಬಜೆಟ್‌: ಕೇಂದ್ರ ಸರ್ಕಾರದ ಹಗ್ಗದ ಮೇಲಿನ ನಡಿಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2014, 19:30 IST
Last Updated 6 ಜುಲೈ 2014, 19:30 IST

ನವದೆಹಲಿ (ಪಿಟಿಐ): ಒಂದೆಡೆ ತೆರಿಗೆ ವಿನಾಯಿತಿ ಬಯಸುತ್ತಿರುವ ಮಧ್ಯಮ ವರ್ಗದ ಜನತೆ, ಇನ್ನೊಂದೆಡೆ ಬಂಡವಾಳ ಹೂಡಿಕೆ ಹಾಗೂ ಆರ್ಥಿಕ ಬೆಳವಣಿಗೆ ಉತ್ತೇಜಿಸಲು ಪೂರಕ ವಾತಾವರಣ ನಿರ್ಮಿಸಬೇಕಾದ ಒತ್ತಡ– ಹೀಗಾಗಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಗುರುವಾರ ಮಂಡಿಸಲಿರುವ  ಬಜೆಟ್‌ ಕೇಂದ್ರ ಸರ್ಕಾರದ ಪಾಲಿಗೆ  ಹಗ್ಗದ ಮೇಲಿನ ನಡಿಗೆಯಾಗುವ ನಿರೀಕ್ಷೆ ಇದೆ.

ಇದೇ ಮೊದಲ ಬಾರಿಗೆ ಸ್ವಂತ ಬಲದಿಂದ ಅಧಿಕಾರ ರಚಿಸುವಷ್ಟು ಸ್ಥಾನಗಳನ್ನು ಗಳಿಸಿರುವ ಬಿಜೆಪಿಯು ಚುನಾವಣಾ ಪ್ರಚಾರದ ವೇಳೆ ಹಣದುಬ್ಬರದಿಂದ ಬಸವಳಿದಿರುವ ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸುವ ಭರವಸೆಗಳನ್ನು ನೀಡಿತ್ತು. ಆದರೆ ಬಂಡವಾಳ ಹರಿವು ಸ್ಥಗಿತ­ಗೊಂಡು, ವಿತ್ತೀಯ ಕೊರತೆ ಅಧಿಕ­ವಾಗಿ, ಜಾಗತಿಕ ಸನ್ನಿವೇಶವೂ ವ್ಯಾಪಾರ– ವಹಿವಾಟಿಗೆ ಪೂರಕವಾ­ಗಿಲ್ಲದ ಸಂದರ್ಭ ಇದಾಗಿದೆ. ಹೀಗಾಗಿ, ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿ, ಚುನಾವಣೆಯ ವೇಳೆ ತಾನು ಆಡಿದ್ದ ಮಾತುಗಳನ್ನು ಹೇಗೆ ಈಡೇರಿಸುತ್ತದೆ ಎಂಬುದನ್ನು ನೋಡಬೇಕಾಗಿದೆ.

ಹೊಸ ಸರ್ಕಾರವು, ತೆರಿಗೆ ಪಾವತಿಯ ವಿವಿಧ ಸ್ಥರಗಳ ಮಿತಿ­ಗಳನ್ನು ಹೆಚ್ಚಿಸುವ ಜತೆಗೆ ಹಣದುಬ್ಬ­ರದ ಬೇಗೆಗೆ ಸಿಲುಕಿರುವ ವೇತನದಾರ ವರ್ಗದ ಮೇಲಿನ ಭಾರವನ್ನು ತಗ್ಗಿಸ­ಲಿದೆ ಎಂಬ ಆಶಾಭಾವನೆ ತೆರಿಗೆದಾರ­ರಲ್ಲಿ ಮನೆ­ಮಾಡಿದೆ. ಇದೇ ವೇಳೆ ಹೂಡಿಕೆ ಹೆಚ್ಚಿಸಲು ಉದ್ದಿಮೆ­ಗಳಿಗೆ ತೆರಿಗೆ ವಿನಾಯಿತಿಗಳನ್ನು ಪ್ರಕಟಿಸ­ಬಹು­ದೆಂಬ ಮಾತುಗಳೂ ಕೇಳಿಬರು­ತ್ತಿವೆ. ಬಜೆಟ್‌ ಮಂಡನೆಗೆ ಮುಂಚೆ, ವಾಹನ ಮತ್ತು ಗ್ರಾಹಕ ಉತ್ಪನ್ನ ವಲ­ಯ­ಗಳಿಗೆ ಡಿಸೆಂಬರ್‌ವರೆಗೆ ಅನ್ವಯ­ವಾಗುವಂತೆ ಅಬಕಾರಿ ಸುಂಕದಲ್ಲಿ ರಿಯಾಯಿತಿ ವಿಸ್ತರಿಸಿರುವ ಸರ್ಕಾರದ ನಿರ್ಧಾರ ಇದಕ್ಕೆ ಪುಷ್ಟಿ ನೀಡುವಂತಿದೆ.

ಅಂಕೆಗೆ ಸಿಗದೆ ಅಧಿಕವಾಗುತ್ತಿದ್ದ ಚಾಲ್ತಿ ಖಾತೆ ಕೊರತೆಗೆ ಕಡಿವಾಣ ಹಾಕಲು ಸರ್ಕಾರವು ಕಳೆದ ವರ್ಷ ಬಂಗಾರದ ಆಮದಿನ ಮೇಲಿನ ಸುಂಕವನ್ನು ಏರಿಕೆ ಮಾಡಿತ್ತು.  ಈಗ ಹಣಕಾಸು ಸಚಿವರು ಬಂಗಾರದ ಆಮದಿನ ಮೇಲಿನ ಸುಂಕವನ್ನು ಕಡಿಮೆಗೊಳಿಸಬಹುದೆಂಬ ನಿರೀಕ್ಷೆ ಇದೆ.

ಮುಂಗಾರು ಮಳೆಯ ತೀವ್ರ ಕೊರತೆಯಿಂದ, ಇಳುವರಿ ನಷ್ಟದ ಚಿಂತೆಗೆ ಈಡಾಗಿರುವ ರೈತ ಸಮುದಾ­ಯದ ನೆರವಿಗೂ ಸರ್ಕಾರ ಧಾವಿಸುವ ಅಗತ್ಯವಿದೆ. ಇದಕ್ಕಾಗಿ ಸರ್ಕಾರವು ‘ಸುಸ್ಥಿರ ಬೆಲೆ ನಿಧಿ’ಯನ್ನು ಅಸ್ತಿತ್ವಕ್ಕೆ ತರುವ ಸಾಧ್ಯತೆಯೂ ಇದೆ. ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಪ್ರಸ್ತಾಪಿಸಿತ್ತು.

ಒಟ್ಟಾರೆ ಸನ್ನಿವೇಶ ಹೇಗಿದೆ ಎಂದರೆ, ಜನಪ್ರಿಯತೆಯ ಸೆಳೆತ ಒಂದು ದಿಕ್ಕಿಗಿದ್ದರೆ ವಿತ್ತೀಯ ಶಿಸ್ತಿಗಾಗಿ ಅನುಸರಿಸಬೇಕಾದ ಕ್ರಮಗಳು ವಿರುದ್ಧ ದಿಕ್ಕಿನಲ್ಲಿವೆ. ಎರಡರ ಸಮತೋಲನ ಸುಲಭವಲ್ಲ ಎಂಬುದು ಜೇಟ್ಲಿ ಅವರಿಗೂ ಗೊತ್ತು. ‘ಗೊತ್ತುಗುರಿಯಿಲ್ಲದ ಜನಪ್ರಿಯ ಕ್ರಮಗಳ ಮೊರೆ ಹೋದರೆ ಅದರಿಂದ ಬೊಕ್ಕಸಕ್ಕೆ ಹೊರೆಯಾಗುತ್ತದೆ’ ಎಂದು ಜೇಟ್ಲಿ ಅವರು ಇತ್ತೀಚೆಗೆ ಹೇಳಿದ ಮಾತುಗಳೇ ಇದಕ್ಕೆ ಸಾಕ್ಷಿ. ಅದಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರೂ ಬಜೆಟ್‌ನಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಸುಳಿವು ನೀಡಿದ್ದರು.

ಸಿಗರೇಟ್‌ ಮತ್ತು ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಹೆಚ್ಚಾಗುವುದರಿಂದ ಧೂಮಪಾನಿಗಳ ಜೇಬಿಗೆ ಜೋರಾಗಿಯೇ ಬಿಸಿ ತಾಕುವ ಸೂಚನೆಗಳಿವೆ. ವಾರ್ಷಿಕ 10 ಕೋಟಿ ರೂಪಾಯಿಗಿಂತ ಹೆಚ್ಚಿನ ಆದಾಯ ಇರುವವರಿಗೆ ತೆರಿಗೆ ಏರಿಸುವ ಸಾಧ್ಯತೆಯೂ ಇದೆ.
ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಪೂರ್ವಾನ್ವಯ­ವಾಗುವಂತೆ ತೆರಿಗೆ ನೀತಿಯನ್ನು ಬದಲಿಸುವ ಪ್ರಸ್ತಾಪವೂ ಬಜೆಟ್‌ ಆಗಬಹುದು. ಆದರೆ ವೊಡಾಫೋನ್‌ ಕಂಪೆನಿಯ ತೆರಿಗೆ ವಿವಾದ ಮೊತ್ತವು 20,000 ಕೋಟಿ ರೂಪಾಯಿಗಳಿಗೂ ಅಧಿಕವಿರುವುದರಿಂದ ಈ ವಿಷಯದಲ್ಲಿ ಸರ್ಕಾರ ಏನನ್ನೂ  ಆಡಲು ಸಾಧ್ಯವಿಲ್ಲವೆಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.