ADVERTISEMENT

ಬಳ್ಳಾರಿ–ಹೊಸಪೇಟೆ ರಸ್ತೆ ಮತ್ತೆ ವಿಳಂಬ

20 ಹೆದ್ದಾರಿ ನಿರ್ಮಾಣ ಯೋಜನೆ ರದ್ದು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2014, 19:30 IST
Last Updated 30 ಮಾರ್ಚ್ 2014, 19:30 IST

ನವದೆಹಲಿ: ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಸರ ಸಚಿವಾ­ಲಯದ ಪರವಾನಗಿ ವಿಳಂಬದ ಕಾರಣ ನೀಡಿ ಸುಮಾರು 2,500ಕಿ.ಮೀ ಹೆದ್ದಾರಿ ನಿರ್ಮಾಣದಿಂದ  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಎಚ್‌ಐ) ಹಿಂದೆ ಸರಿದಿದೆ.

ದೇಶದ ವಿವಿಧೆಡೆ ರಸ್ತೆ ಮತ್ತು ಹೆದ್ದಾರಿ ನಿರ್ಮಾಣಕ್ಕಾಗಿ ರೂಪಿಸಲಾಗಿದ್ದ ಒಟ್ಟು 23  ಯೋಜನೆಗಳನ್ನು ಎನ್‌ಎಎಚ್‌ಐ ರದ್ದುಪಡಿಸಿರುವುದರಿಂದ ಕರ್ನಾಟಕದ ಬಳ್ಳಾರಿ–ಹೊಸಪೇಟೆ ನಡುವಿನ ರಸ್ತೆ ಸೇರಿದಂತೆ ಅನೇಕ ರಸ್ತೆಗಳ ನಿರ್ಮಾಣ ಕಾಮಗಾರಿ ನನೆಗುದಿಗೆ ಬೀಳಲಿದೆ.

ಹೆದ್ದಾರಿ ಪ್ರಾಧಿಕಾರದ ಈ ನಿರ್ಧಾರ ಯುಪಿಎ ಮಹತ್ವಾಕಾಂಕ್ಷೆಯ ರಸ್ತೆ  ಮತ್ತು ಹೆದ್ದಾರಿ ನಿರ್ಮಾಣ ಯೋಜನೆಗೆ ತೀವ್ರ ಹಿನ್ನಡೆಯಾದಂತಾಗಿದೆ.

ಗುತ್ತಿಗೆದಾರರು ಭದ್ರತಾ ಠೇವಣಿ ನೀಡದಿರುವುದು ಹೆದ್ದಾರಿ ಪ್ರಾಧಿಕಾರದ  ಅಸಮಾಧಾನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಹೆದ್ದಾರಿ ಮತ್ತು ರಸ್ತೆ ನಿರ್ಮಾಣಕ್ಕಾಗಿ 2011–12ರಲ್ಲಿ ಒಟ್ಟು 23 ಯೋಜನೆಗಳನ್ನು ಪ್ರಾಧಿಕಾರಕ್ಕೆ ನೀಡಲಾಗಿತ್ತು.

ಅಂತರ್‌ ಸಚಿವಾಲ ಸಮಿತಿ ಅನುಮತಿ ಪಡೆದ ನಂತರ  23 ಯೋಜನೆಗಳಿಗೆ ಹೊಸದಾಗಿ ಟೆಂಡರ್ ಕರೆಯಲಾಗುವುದು. ಸಮಿತಿ ಈ ಯೋಜನೆಗಳಿಗೆ ಪುನಃ ಹೊಸ ದರಗಳನ್ನು ನಿಗದಿ ಪಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರತಿದಿನ 22 ಕಿ.ಮೀ ಹೆದ್ದಾರಿ ನಿರ್ಮಿಸುವುದಾಗಿ ಭರವಸೆ ನೀಡಿದ್ದ ಯುಪಿಎ ಸರ್ಕಾರಕ್ಕೆ ವಾಸ್ತವದಲ್ಲಿ ಕೇವಲ 1.5 ಕಿ.ಮೀ ರಸ್ತೆ ನಿರ್ಮಾಣ ಮಾಡಲು ಮಾತ್ರ ಸಾಧ್ಯವಾಗಿದೆ. ರಸ್ತೆ ನಿರ್ಮಾಣದ ಹೊಣೆ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ವೈಫಲ್ಯಕ್ಕಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದೆ’ ಎಂದು ಬಿಜೆಪಿ ಹಿರಿಯ ನಾಯಕ ಯಶ್ವಂತ್‌ ಸಿನ್ಹ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.